ಮೋದಿಗೆ ಚೀನಾ ಪ್ರಧಾನಿ ಅಭಿನಂದನೆ
ಬೀಚಿಂಗ್,ಜೂ.೧೨-ಚೀನಾದ ಪ್ರಧಾನಿ ಲಿ ಕ್ವಿಯಾಂಗ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪುನರಾಯ್ಕೆಗಾಗಿ ಅಭಿನಂದಿಸಿದ್ದಾರೆ ಮತ್ತು ಬೀಜಿಂಗ್ ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನವದೆಹಲಿಯೊಂದಿಗೆ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
ಚೀನಾ-ಭಾರತ ಸಂಬಂಧಗಳ ಬಲವಾದ ಮತ್ತು ಸ್ಥಿರವಾದ ಬೆಳವಣಿಗೆಯು ಉಭಯ ದೇಶಗಳ ಜನರ ಹಿತಾಸಕ್ತಿಗಳಿಗೆ ಮಾತ್ರವಲ್ಲ, ಪ್ರದೇಶ ಮತ್ತು ಜಗತ್ತಿಗೆ ಸ್ಥಿರತೆ ಮತ್ತು ಸಕಾರಾತ್ಮಕ ಶಕ್ತಿಯ ಪ್ರಸರಣಕ್ಕೆ ಕೊಡುಗೆ ನೀಡುತ್ತದೆ ಎಂದು ಲಿ ಸಂದೇಶದಲ್ಲಿ ತಿಳಿಸಿದೆ.
ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ಲಿ ಹೇಳಿದ್ದಾರೆ .ಜೂನ್ ೫ ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ ಚೀನಾದ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ಗಾಲ್ವಾನ್ ಸಂಘರ್ಷದ ಘಟನೆಯಿಂದ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಸಂಬಂಧಗಳನ್ನು ಆರೋಗ್ಯಕರ ಮತ್ತು ಸ್ಥಿರವಾದ ಹಾದಿಯಲ್ಲಿ ಕೊಂಡೊಯ್ಯಲು ನಾವು ಭವಿಷ್ಯದ ಕಡೆಗೆ ನೋಡಬೇಕು ಎಂದಿದೆ.
ಮೇ ೫, ೨೦೨೦ ರಂದು ಪೂರ್ವ ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ, ವ್ಯಾಪಾರವನ್ನು ಹೊರತುಪಡಿಸಿ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದರ ನಂತರ, ಗಾಲ್ವಾನ್ ಬಳಿಯ ಪ್ಯಾಂಗೊಂಗ್ ತ್ಸೋ (ಸರೋವರ) ಪ್ರದೇಶದಲ್ಲಿ ಹಿಂಸಾತ್ಮಕ ಘರ್ಷಣೆ ನಡೆಯಿತು. ನಾವು ಭಾರತದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳನ್ನು ಗಮನಿಸಿದ್ದೇವೆ ಮತ್ತು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ವಿಜಯವನ್ನು ಅಭಿನಂದಿಸಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.