ಕಗ್ಗದಾಸಪುರ ಕೆರೆ ಅಭಿವೃದ್ಧಿಹಣದುರ್ಬಳಕೆ : ಆಪ್ ಆರೋಪ
ಬೆಂಗಳೂರು, ಜೂ.೧೩- ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಕಗ್ಗದಾಸಪುರ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ,ಸಿ ವಿ ರಾಮನ್ ನಗರ ಬಿಜೆಪಿ ಶಾಸಕ ಎಸ್ ರಘು ೨೦೦೯ ರಿಂದಲೇ ಕಗ್ಗದಾಸಪುರ ಕೆರೆಯ ಅಭಿವೃಧ್ದಿ ಮಾಡಲು ಮುಂದಾಗಿದ್ದು, ೧೬ ವರ್ಷಗಳಾದರೂ ಕೆರೆಯ ಪರಿಸ್ಥಿತಿ ಬದಲಾಗಿಲ್ಲ. ಆಮೆಗತಿಯಲ್ಲಿ ಸಾಗಿದ್ದರೂ ಈವರೆಗೆ ಮುಗಿಯಬೇಕಿತ್ತು ಎಂದರು.
ಕೋಟ್ಯಂತರ ರೂ. ಖರ್ಚಾಗುತ್ತಲೇ ಇದೆ. ಕೆಲಸಗಳು ಮಾತ್ರ ಮುಂದೆ ಹೋಗುತ್ತಿಲ್ಲ. ಹಳೇ ಬಿಲ್ಲು, ಕೆಲಸಗಳಾಗದಿದ್ದರೂ ನಕಲಿ ಬಿಲ್ಲುಗಳು, ಕೆರೆಯ ಪ್ರಭಾವಿಗಳ ಅತಿಕ್ರಮಣಗಳನ್ನು ತೆರವುಗೊಳಿಸದಿರುವುದೇ ಕಗ್ಗದಾಸಪುರ ಕೆರೆಯ ಅಭಿವೃದ್ಧಿ ಅನ್ನಬೇಕಷ್ಟೇ.
೨೦೧೭ರಲ್ಲಿ ಸ್ಥಳೀಯ ನಾಗರೀಕರು ಸೇರಿ ಕೆರೆ ಸ್ವಚ್ಛಗೊಳಿಸಲು ಮುಂದಾಗಿದ್ದರು, ನಮ್ಮೆಲ್ಲರ ೨೬ ವಾರಗಳ ಪ್ರಯತ್ನದಿಂದ ಕಣ್ತೆರೆದ ಸಮ್ಮಿಶ್ರ ಸರ್ಕಾರ ಅಭಿವೃಧ್ದಿಗೆ ಅಂತ ೨೦೧೯ ರಲ್ಲಿ ಹಣ ಬಿಡುಗಡೆ ಮಾಡಿತ್ತು. ಮಾಹಿತಿ ಹಕ್ಕಿನ ಅನ್ವಯದಡಿ ೨೦೧೯ -೨೦ ರಲ್ಲಿ ೮ ಕೋಟಿ ಮತ್ತು ೨೦೨೩-೨೪ ರಲ್ಲಿ ೪ ಕೋಟಿ ಮಂಜೂರು ಮಾಡಲಾಗಿದೆ ಮತ್ತು ಎಸ್ಟಿಪಿಗೆ ಮಾತ್ರವೇ ೨೭ ಕೋಟಿ ಮಂಜೂರು ಮಾಡಲಾಗಿತ್ತು ಎಂದು ಮೋಹನ್ ದಾಸರಿ ಹೇಳಿದರು.
ಕಳೆದ ಮೂರು ವರ್ಷದಲ್ಲಿ ೧೨ ಕೋಟಿ ರೂಪಾಯಿ ಅನುದಾನ ಕಗ್ಗದಾಸನಪುರ ಅಭಿವೃದ್ಧಿಗೆ ನೀಡಲಾಗಿದೆ. ೨೦೨೧ ರಲ್ಲಿ ಶಾಸಕ ಎಸ್ ರಘು ಕಗ್ಗದಾಸಪುರ ಕೆರೆಯ ಅಭಿವೃಧ್ದಿಯ ಬಗ್ಗೆ ಮಾತನಾಡುವಾಗ, ೪೫ ದಿನದಲ್ಲಿ ಹೂಳೆತ್ತುವ ಕೆಲಸ ಮುಗಿಯಲಿದೆ ಮತ್ತು ಇತರೆ ಕೆಲಸಗಳನ್ನು ಮುಗಿಸಿ ೬ ತಿಂಗಳಲ್ಲಿ ಸಂಪೂರ್ಣ ಅಭಿವೃಧ್ದಿ ಕೆಲಸಗಳನ್ನು ಮುಗಿಸಲಾಗುವುದೆಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಜೂನ್‌ನಲ್ಲಿ ನಾವು ಸ್ಥಳ ಪರಿಶೀಲನೆ ಮಾಡಿದಾಗಲೂ ಕೆರೆಯ ಪರಿಸ್ಥಿತಿ ಅದೇ ರೀತಿಯಿದೆ. ಕೋಟಿ ಕೋಟಿ ಹಣ ಮಾತ್ರ ಸಮಯ ಸಮಯಕ್ಕೆ ಖರ್ಚು ಮಾತ್ರ ಆಗುತ್ತಲೇ ಇದೆ. ಕೆರೆಯ ಅಭಿವೃಧ್ದಿ ಹೆಸರಲ್ಲಿ ಶಾಸಕ ಎಸ್. ರಘು ಹಗಲು ದರೋಡೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ಬಿಎಂಟಿಎಫ್ ಅಥವಾ ಲೋಕಾಯುಕ್ತಕ್ಕೆ ದೂರು ನೀಡುವುದಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಬಿಬಿಎಂಪಿ ಕಾರ್ಪೊರೇಟರ್, ಶಾಸಕ, ಸಂಸದ ಎಲ್ಲರೂ ಬಿಜೆಪಿಯವರೇ ಇದ್ದರೂ, ಸರ್ಕಾರ ಕೂಡ ಬಿಜೆಪಿಯದ್ದೇ ಇದ್ದಾಗಲೂ ಕೆರೆ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುವುದು, ಅಕ್ರಮದ ಬಗ್ಗೆ ದೂರು ನೀಡಲಾಗುವುದು ಎಂದರು.