೧೫೦ ಕ್ವಿಂಟಾಲ್ ಅಕ್ಕಿ ಜಪ್ತಿ
ಕಲಬುರಗಿ,ಜೂ.೧೩-ಅಕ್ರಮವಾಗಿ ಸಾಗಿಸುತ್ತಿದ್ದ ೧೫೦ ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಶಹಾಬಾದ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಡಿತರ ಅಕ್ಕಿಯನ್ನು ವಿತರಿಸದೆ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಪಿಎಸ್‌ಐ ಶಿವರಾಯ, ಸಿಬ್ಬಂದಿಗಳಾದ ಗುಂಡಪ್ಪ, ಶ್ರೀಕಾಂತ ಉಪಳಪ್ಪ ಮತ್ತು ಆಹಾರ ಇಲಾಖೆ ನಿರ್ದೇಶಕರಾದ ಶ್ರೀಕಾಂತ ಮತ್ತು ಮಂಜು ಅವರು ದಾಳಿ ನಡೆಸಿ ವಾಡಿ ವೃತ್ತದಲ್ಲಿ ವಾಹನ ಮತ್ತು ವಾಹನ ಚಾಲಕನನ್ನು ವಶಕ್ಕೆ ಪಡೆದುಕೊಂಡು ೧೫೦ ಕ್ವಿಂಟಾಲ್ ಅಕ್ಕಿ ಚೀಲವನ್ನು ಜಪ್ತಿ ಮಾಡಿದ್ದಾರೆ. ಶಹಾಬಾದನ ಜುನೈದ್ ಎಂಬಾತ ಶಹಾಬಾದದಿಂದ ಉಮರ್ಗಾ ಕಡೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. ಉಮರ್ಗಾ ಅಕ್ಕಿ ಗೋಡಾನ್ ಮಾಲೀಕನ ವಿರುದ್ಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.