ಕಾವೇರಿ ನೀರು ಸಂಪರ್ಕಕ್ಕೆ ಆಗ್ರಹಿಸಿ ಪ್ರತಿಭಟನೆ
ಕೆ.ಆರ್. ಪುರ,ಜೂ.೧೩- ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಕ್ಷೇತ್ರದ ಹೊರಮಾವು ವಾರ್ಡನ ಚೇಳಕೆರೆ,ನಗರೇಶ್ವರ ನಾಗೇನಹಳ್ಳಿ,ಹೊರಮಾವು, ಅಗರ ನಿವಾಸಿಗಳು ಸುತ್ತಮುತ್ತಲ ಗ್ರಾಮಸ್ಥರು ಎಚ್.ಬಿ.ಆರ್.ಬಡಾವಣೆಯಲ್ಲಿರುವ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಅಭಾವವಿದೆ, ಆದರೆ ವರ್ಷಗಳೆ ಕಳೆದರೂ ಕುಡಿಯುವ ನೀರಿನ ಬವಣೆ ಕಡಿಮೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಲಮಂಡಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕ್ಷೇತ್ರದ ಎಸ್.ಸಿ.ಮೋರ್ಚಾ ಅಧ್ಯಕ್ಷ ಸಂಪತ್ ಕುಮಾರ್ ಅವರು ಹೊರಮಾವು ವಾರ್ಡ ಹಾಗೂ ಚೇಳಕೆರೆ ವಾರ್ಡ್‌ಗಳು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದು ಜನಸಂಖ್ಯೆ ಹೆಚ್ಚಾಗಿದೆ, ಇದರಿಂದ ನೀರಿನ ಕೊರತೆ ಉಂಟಾಗಿ ಜನ ಹೈರಾಣಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಗೂ ಇಷ್ಟು ಹಾಹಾಕಾರ ಹೆಚ್ಚಾದರೆ ಬಡ ಹಾಗೂ ಮಧ್ಯಮ ವರ್ಗದ ಜನತೆ ಸಾವಿರಾರು ರೂಪಾಯಿ ಕೊಟ್ಟು ಟ್ಯಾಂಕರ್ ನೀರು ಖರೀದಿಸುವ ಪರಿಸ್ಥಿತಿ ಇದ್ದು,ಅತಿ ಶೀಘ್ರದಲ್ಲಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಕಾವೇರಿ ಪೈಪ್ ಲೈನ್ ಹಾಗೂ ಮೀಟರ್ ಗಳ ಅಳವಡಿಸಿ ವರ್ಷಗಳೆ ಕಳೆದರೂ ಸಹ ನೀರಿನ ಸಂಪರ್ಕ ಮಾತ್ರ ದೊರೆತಿಲ್ಲ,ಅಧಿಕಾರಿಗಳು ತ್ವರಿತವಾಗಿ ನೀರಿನ ಸಮಸ್ಯೆ ಪರಿಹಾರ ಮಾಡಬೇಕು ಹಾಗೂ ತಾತ್ಕಾಲಿಕವಾಗಿ ನೀರಿನ ಪೂರೈಕೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು. ಸಂದರ್ಭದಲ್ಲಿ ನಗರೇಶ್ವರ ನಾಗೇನಹಳ್ಳಿ ಲೋಕೆಶ್,ಹೊರಮಾವು ಅಗರ ಆನಂದ್,ರವಿ,ಮಹೇಶ್ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.