ಉಗ್ರನ ರೇಖಾಚಿತ್ರ ಬಿಡುಗಡೆ: ಸುಳಿವು ನೀಡಿದರೆ ೨೦ ಲಕ್ಷ ಬಹುಮಾನ
ಶ್ರೀನಗರ,ಜೂ.೧೨- ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿ ಪುಟ್ಟ ಕಂದಮ್ಮನೂ ಸೇರಿ ೯ ಮಂದಿ ಹತ್ಯೆಗೈದ ಶಂಕಿತ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿ ಆತನ ಸುಳಿವು ನೀಡಿದವರಿಗೆ ೨೦ ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ರಿಯಾಸಿ ಜಿಲ್ಲೆಯ ಪೂನಿ ಪ್ರದೇಶದಲ್ಲಿ ಜೂ.೯ ರಂದು ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ರೇಖಾ ಚಿತ್ರ ಬಿಡುಗಡೆ ಮಾಡಿದ್ದೇವೆ. ಈತನ ಸುಳಿವು ನೀಡಿದವರಿಗೆ ರಿಯಾಸಿ ಪೊಲೀಸರು ೨೦ ಲಕ್ಷ ರೂ.ಗಳ ಬಹುಮಾನವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದಲ್ಲಿ ಈ ರೇಖಾಚಿತ್ರವನ್ನು ರಚಿಸಲಾಗಿದೆ
ಭಯೋತ್ಪಾದಕನ ಬಗ್ಗೆ ಸುಳಿವು ಸಿಕ್ಕವರು ರಿಯಾಸಿ ಎಸ್‌ಎಸ್‌ಪಿ ೯೨೦೫೫೭೧೩೩೨, ರಿಯಾಸಿ ಎಎಸ್‌ಪಿ- ೯೪೧೯೧೧೩೧೫೯, ರಿಯಾಸಿ ಡಿವೈಎಸ್‌ಪಿ ಪ್ರಧಾನ ಕಚೇರಿ ೯೪೧೯೧೩೩೪೯೯, ಪೂನಿ ಎಸ್‌ಎಚ್‌ಒ- ೭೦೫೧೦೦೩೨೧೪, ರಾನ್ಸೂ ಎಸ್‌ಎಚ್‌ಒ ೭೦೫೧೦೦೩೨೧೩, ರಿಯಾಸಿ ಪಿಸಿಆರ್ ೯೬೨೨೮೫೬೨೯೫ ನಂಬರ್‌ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.
ರಿಯಾಸಿ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಭದ್ರತಾ ಸಿಬ್ಬಂದಿಯ ೧೧ ತಂಡಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ರಾನ್ಸೊ-ಪೊನಿ-ತ್ರೇಯತ್ ಪ್ರದೇಶದಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಕೂವಾಡ ಇದೆ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐರ) ತಂಡವು ರಿಯಾಸಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ ಮತ್ತು ಎನ್‌ಐಎಯ ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಂಗ್ರಹಿಸುತ್ತಿದೆ.
ಜೂನ್ ೧೦ರಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಿಯಾಸಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ ತಲಾ ೧೦ ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ ೫೦ ಸಾವಿರ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
ಮಾಹಿತಿ ಪಡೆದ ಪ್ರಧಾನಿ:
ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. “ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.