ಆಪಲ್ ಓಪನ್‌ಎಐ ಪಾಲುದಾರಿಕೆಗೆ ಮಸ್ಕ್ ವಿರೋಧ
ನ್ಯೂಯಾರ್ಕ್,ಜೂ.೧೨-ಅಮೆರಿಕನ್ ಸ್ಮಾರ್ಟ್‌ಫೋನ್ ತಯಾರಕ ಆಪಲ್ ಮತ್ತು ಓಪನ್‌ಎಐ ನಡುವಿನ ಪಾಲುದಾರಿಕೆಯನ್ನು ಎಲೋನ್ ಮಸ್ಕ್ ಬಲವಾಗಿ ವಿರೋಧಿಸಿದ್ದಾರೆ. ಆಪಲ್ ಈ ರೀತಿ ಮಾಡಿದರೆ ತನ್ನ ಕಂಪನಿಗಳಲ್ಲಿ ಆಪಲ್ ನ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವುದಾಗಿ ಎಲೋನ್ ಮಸ್ಕ್ ಬೆದರಿಕೆ ಹಾಕಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಆಪಲ್ ಮೇಲೆ ತೀವ್ರ ದಾಳಿ ನಡೆಸಿದರು. ಅವರು ಈ ಪಾಲುದಾರಿಕೆಯನ್ನು ‘ಸ್ವೀಕಾರಾರ್ಹವಲ್ಲದ ಭದ್ರತಾ ಉಲ್ಲಂಘನೆ’ ಎಂದು ಬಣ್ಣಿಸಿದ್ದಾರೆ. ಆಪಲ್ ಮತ್ತು ಓಪನ್ ಎಐ ನಡುವಿನ ಈ ಒಪ್ಪಂದ ಮುಂದುವರಿದರೆ, ತನ್ನ ಕಂಪನಿಗಳಿಂದ ಎಲ್ಲಾ ಆಪಲ್ ಸಾಧನಗಳನ್ನು ನಿಷೇಧಿಸಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್, ಅವರು ಮುಂಚೂಣಿಯಲ್ಲಿರುವ ಅಂತಾರಾಷ್ಟ್ರೀಯ ಕಂಪನಿ ಆಪಲ್ ತನ್ನ ಸಾಧನೆಗಳಲ್ಲಿ ಎಐ ರಚಿಸಿದ ಕೃತಕ ಬುದ್ದಿಮತ್ತೆಯನ್ನು ಬಳಸಿದರೆ ಆಪಲ್ ಉತ್ಪನ್ನಗಳನ್ನು ತಮ್ಮ ಕಂಪನಿಯಲ್ಲಿ ನಿಷೇಧಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಹಲವಾರು ಪೋಸ್ಟ್‌ಗಳಲ್ಲಿ ಬಳಕೆದಾರರ ಮಾಹಿತಿಯ ಸುರಕ್ಷತೆಯ ಬಗ್ಗೆ ಮಸ್ಕ್ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ಕಂಪನಿಗಳ ನಡುವಿನ ಒಪ್ಪಂದವನ್ನು ಸ್ವೀಕಾರಾರ್ಹವಲ್ಲದ ಭದ್ರತಾ ಉಲ್ಲಂಘನೆ ಎಂದು ಬಣ್ಣಿಸಿದ ಅವರು, ಈ ಒಪ್ಪಂದ ನಡೆಯುವುದನ್ನು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಆಪಲ್ ಚಾಟ್ ಜಿಪಿಟಿಯ ಸಹಾಯವನ್ನು ತೆಗೆದುಕೊಳ್ಳುತ್ತದೆ
ಆಪಲ್ ಜೂನ್ ೧೦ ರಂದು ತನ್ನ ವಾರ್ಷಿಕ ಡೆವಲಪರ್‌ಗಳ ಈವೆಂಟ್‌ನ (ಡಬ್ಲ್ಯುಡಬ್ಲ್ಯುಡಿಸಿ ೨೦೨೪) ಮುಖ್ಯ ಭಾಷಣದಲ್ಲಿ ಚಾಟ್ ಜಿಪಿಟಿ ಚಾಟ್‌ಬಾಟ್ ತನ್ನ ಸಾಧನಗಳಿಗೆ ತರಲು ಓಪನ್ ಎಐ ಜೊತೆ ಸಹಯೋಗವನ್ನು ಘೋಷಿಸಿದೆ. ಆಪಲ್ ಸಿಇಒ ಟಿಮ್ ಕುಕ್ ಓಪನ್ ಎಐ ಆಪಲ್ ಐಒಎಸ್ ೧೮ ಗೆ ಸಂಯೋಜಿಸಲಾಗುವುದು ಎಂದು ಘೋಷಿಸಿದ್ದಾರೆ. ನವೀಕರಣದ ಭಾಗವಾಗಿ, ಓಪನ್ ಎಐನ ಜನಪ್ರಿಯ ಚಾಟ್ ಜಿಪಿಟಿ ಚಾಟ್‌ಬಾಟ್ ಬಳಸಬಹುದು. ಚಾಟ್‌ಜಿಪಿಟಿಯೊಂದಿಗೆ ತಮ್ಮ ಪ್ರಶ್ನೆಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅನುಮತಿಯನ್ನು ಕೇಳಲಾಗುತ್ತದೆ, ಆದರೆ ಅವರ ವಿನಂತಿಗಳು ಮತ್ತು ಮಾಹಿತಿಯನ್ನು ಲಾಗ್ ಮಾಡಲಾಗುವುದಿಲ್ಲ ಎಂದು ಆಪಲ್ ಹೇಳಿದೆ. ಆಪಲ್ ಮತ್ತು ಓಪನ್ ಎಐ ನಡುವಿನ ಈ ಒಪ್ಪಂದದ ಬಗ್ಗೆ, ಎಲೋನ್ ಮಸ್ಕ್ ಕಂಪನಿಯು ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಆಪಲ್ ತನ್ನ ಸಾಧನಗಳಲ್ಲಿ ಚಾಟ್ ಜಿಪಿಟಿಯನ್ನು ಸಂಯೋಜಿಸುವುದರಿಂದ ಬಳಕೆದಾರರ ಡೇಟಾ ಗೌಪ್ಯತೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಮಸ್ಕಿನ ಕಾಮೆಂಟ್‌ಗಳ ಮೇಲೆ ನೆಟ್‌ನಲ್ಲಿ ಚರ್ಚೆ ನಡೆದಿದೆ. ಎಐ ಜೊತೆಗಿನ ಸಂಪರ್ಕದಿಂದಾಗಿ ಆಪಲ್ ಕಂಪನಿಗೆ ಸಂಕಷ್ಟ ಎದುರಾಗಲಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.