ಚೂರಿ ಇರಿತ ಪೂರ್ವ ನಿಯೋಜಿತ ಕೃತ್ಯ
ಬೆಂಗಳೂರು, ಜೂ. ೧೨- ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಂಗಳೂರಿನ ಉಳ್ಳಾಲದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಚೂರಿಯಿಂದ ಇರಿದಿರುವುದು ಪೂರ್ವ ನಿಯೋಜಿತ ಕೃತ್ಯ ಎಂದು ವಿರೋಧ ಪಕ್ಷದ ನಾಯಾಕ ಆರ್. ಅಶೋಕ್ ಆರೋಪಿಸಿದ್ದಾರೆ.
ಉಳ್ಳಾಲ ತಾಲ್ಲೂಕಿನ ಬೋಳಿಯಾರ್‌ನಲ್ಲಿ ಚೂರಿ ಹಿರಿತಕ್ಕೆ ಒಳಗಾದ ಬಿಜೆಪಿಯ ಇಬ್ಬರು ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಮೈಮೇಲೆ ಬಂದಂತೆ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಕಾರ್ಯಕರ್ತರನ್ನು ಡ್ಯಾಗರ್‌ನಿಂದ ಇರಿದಿವುದನ್ನು ಗಮನಿಸಿದರೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬಂತೆ ಕಾಣುತ್ತಿದೆ. ತಕ್ಷಣಕ್ಕೆ ಡ್ಯಾಗರ್ ಎಲ್ಲಿಂದ ಬರುತ್ತೆ. ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಕೂಗುವುದು ತಪ್ಪೇ ಎಂದು ಪ್ರಶ್ನಿಸಿದರು. ಮಸೀದಿ ಮುಂದೆ ಭಾರತ್ ಮಾತಾಕಿ ಜೈ ಎಂದಿರುವ ವಿಡಿಯೋ ಗಮನಿಸಿದ್ದೇನೆ. ದೇಶದ ಯಾವ ಭಾಗದಲ್ಲಾದರೂ ದೇಶಕ್ಕೆ ಜೈ ಎಂದರೆ ಸನ್ಮಾನ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಭಾರತ್ ಮಾತಾಕಿ ಜೈ ಎಂದು ಕೂಗಿದರೆ ಡ್ಯಾಗರ್ ಇರಿಯುವ ಕೃತ್ಯಗಳು ನಡೆಯುತ್ತವೆ. ರಾಜ್ಯದಲ್ಲಿ ತಾಲಿಬಾನ್ ಸರ್ಕಾರವನ್ನು ಹೇಳೋರು ಕೇಳೋರು ಯಾರು ಇಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಡಾವಳಿಗಳೆಲ್ಲಾ ಟಿಪ್ಪು ರೀತಿಯಲ್ಲೇ ಇವೆ. ಸಿದ್ಧರಾಮಯ್ಯ ರವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಶಿವಾಜಿನಗರದಲ್ಲಿ ಕೊಲೆಗಳಾಗಿದ್ದವು. ಈಗ ಮತ್ತೆ ಕರ್ನಾಟಕ ಕೊಲೆಗಳ ರಾಜ್ಯವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಪರಾಧ ಪ್ರಕರಣಗಳು ಜಾಸ್ತಿಯಾಗಿವೆ ಎಂದರು.
ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಇರಿತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರು ತಕ್ಕ ಬೆಲೆ ತೆರಲೇಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡುತ್ತೇನೆ ಎಂದು ಆರ್. ಅಶೋಕ್ ಹೇಳಿದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಸ್ ಚೌಟಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಗುಂಪಲ, ಶಾಸಕರಾದ ಡಾ. ಭರತ್‌ಶೆಟ್ಟಿ, ವೇದವ್ಯಾಸ ಕಾಮತ್, ಪ್ರತಾಪ್ ಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.