ಉಗ್ರರ ದಾಳಿ ಓರ್ವ ಯೋಧ ಹುತಾತ್ಮ
ಜಮ್ಮು,ಜೂ.೧೨:ಜಮ್ಮುವಿನ ಕತುವಾ ಮತ್ತು ದೌಡಾ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ೬ ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ತಡರಾತ್ರಿ ಈ ಎರಡೂ ಕಡೆಗಳಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಈ ಘಟನೆ ಸಂಭವಿಸಿದೆ. ಇತ್ತೀಚೆಗೆ ಯಾತ್ರಿಕರ ಖಾಸಗಿ ಬಸ್ ಮೇಲೆ ಉಗ್ರರು ನಡೆಸಿದ ದಾಳಿಯ ಬೆನ್ನಲ್ಲೆ ಈ ಗುಂಡಿನ ಕಾಳಗ ನಡೆದಿದೆ.
ದೌಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ಮತ್ತೊಂದೆಡೆ ಕೇಂದ್ರೀಯ ಮೀಸಲು ಪಡೆ ಯೋಧ ಕಬೀರ್‌ದಾಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಕತುವಾ ಜಿಲ್ಲೆಯ ಸೈದಾಸುಖಾಲ್ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಸೇನೆ ನಡುವೆ ಗುಂಡಿನ ಕಾಳಗದಲ್ಲಿ ಈ ಘಟನೆ ನಡೆದಿದೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಂಡ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಗಡಿ ಸಮೀಪ ನಿನ್ನೆ ಸಂಜೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದಾನೆ.
ಘಟನಾ ಸ್ಳಳದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ. ಈ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಉಗ್ರರಿಗಾಗಿ ಶೋಧ ನಡೆಸಲಾಗಿದೆ ಎಂದು ಎಡಿಜಿಪಿ ಆನಂದ್‌ಜೈನ್ ಮಾಹಿತಿ ನೀಡಿದ್ದಾರೆ.