ಅನ್ನದಾತನಿಗೆ ಮೋದಿ ಸಿಹಿ
ನವದೆಹಲಿ, ಜೂ. ೧೦- ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ನರೇಂದ್ರಮೋದಿ ಅವರು ಪ್ರಧಾನಿ ಹುದ್ದೆಯ ಕಾರ್ಯಾಭಾರದ ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದು, ಪಿಎಂ ಕಿಸಾನ್ ನಿಧಿಯ ಹಣ ಬಿಡುಗಡೆಯ ಕಡತಕ್ಕೆ ಮೊದಲ ಸಹಿ ಹಾಕಿದ್ದಾರೆ.
ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ಜವಾಬ್ದಾರಿಯನ್ನು ಹೊತ್ತಿರುವ ನರೇಂದ್ರಮೋದಿ ಅವರು ಇಂದು ಪ್ರಧಾನಿ ಕಾರ್ಯಾಲಯದ ಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ಕುರ್ಚಿ ಅಲಂಕರಿಸಿದ ತಕ್ಷಣವೇ ರೈತರ ಹಣ ಬಿಡುಗಡೆಯ ಕಡತಕ್ಕೆ ಮೊದಲ ಸಹಿ ಮಾಡುವ ಮೂಲಕ ಮೂರನೇ ಅವಧಿಯ ಪ್ರಧಾನಿಯ ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ.
ಪಿಎಂ ಕಿಸಾನ್ ನಿಧಿ ಯೋಜನೆಯೂ ಸುಮಾರು ೯.೩ ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಸುಮಾರು ೨೦ ಸಾವಿರ ಕೋಟಿ ರೂ. ಪಿಎಂ ಕಿಸಾನ್ ನಿಧಿ ಇದಾಗಿದೆ.
ಪಿಎಂ ಕಿಸಾನ್ ನಿಧಿ ಯೋಜನೆಯಡಿ ದೇಶದ ರೈತರ ಖಾತೆಗೆ ಮೂರು ಕಂತುಗಳಲ್ಲಿ ೬ ಸಾವಿರ ರೂ.ಗಳ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತದೆ. ಇಂದು ಮೂರನೇ ಅವಧಿಯ ಪ್ರಧಾನಿ ಹುದ್ದೆಯ ಮೊದಲ ದಿನ ನರೇಂದ್ರಮೋದಿ ಅವರು ಪಿಎಂ ಕಿಸಾನ್ ನಿಧಿಯ ರೈತರಿಗೆ ೧೭ನೇ ಕಂತಿನ ಹಣ ಬಿಡುಗಡೆಯ ಆದೇಶಕ್ಕೆ ಸಹಿ ಹಾಕಿದರು.
ರೈತರ ಕಲ್ಯಾಣ ಬದ್ಧತೆ
ರೈತರ ಹಣ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ ಅವರು, ನಮ್ಮದು ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರವಾಗಿದೆ. ಹಾಗಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಹಿ ಮಾಡಿದ ಮೊದಲ ಕಡತ ರೈತರ ಕಲ್ಯಾಣಕ್ಕೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ರೈತರ ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕು ಎಂದು ಬಯಸಿದ್ದೇವೆ ಎಂದು ಮೋದಿ ಅವರು ಹೇಳಿದ್ದಾರೆ.

ಚೊಚ್ಚಲ ಸಂಪುಟ ಸಭೆ
ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಚೊಚ್ಚಲ ಸಂಪುಟ ಸಭೆ ಇಂದು ನಡೆಯಲಿದ್ದು, ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಸಾಗಬೇಕಾದ ದಿಕ್ಕು, ದೇಶ ಹಾಗೂ ಜನರ ಅಭಿವೃದ್ಧಿಗೆ ರೂಪಿಸಬೇಕಾದ ಕಾರ್ಯಕ್ರಮಗಳು, ವಿಕಸಿತ ಭಾರತದ ಗುರಿ ಸಾಧಿಸಲು ಕೈಗೊಳ್ಳಬೇಕಾದ ತೀರ್ಮಾನಗಳು ಭಾರತದ ಆರ್ಥಿಕತೆಯನ್ನು ೫ ಟ್ರಿಲಿಯನ್‌ಗೆ ಹೊಯ್ಯಲು ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು ಎಂಬ ಬಗ್ಗೆ ಈ ಸಚಿವ ಸಂಪುಟ ಸಭೆಯಲ್ಲಿ ಚಿಂತನ-ಮಂಥನ ನಡೆದು ಹಲವು ಜನ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.ದೇಶದ ಪ್ರಧಾನಿಯಾಗಿ ೩ನೇ ಬಾರಿಗೆ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಇಂದು ಸಂಜೆ ಕೇಂದ್ರದ ಚೊಚ್ಚಲ ಸಂಪುಟ ಸಭೆ ನಡೆಯಲಿದೆ.
ಈ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಜತೆ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರುಗಳು ಭಾಗಿಯಾಗಲಿದ್ದು, ಸರ್ಕಾರದ ಮುಂದಿನ ದಿಕ್ಕು, ದೆಸೆ ಆಡಳಿತ ವೈಖರಿ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಈ ಸಂಪುಟ ಸಭೆಯಲ್ಲಿ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಸಚಿವ ಸಂಪುಟದ ಮೊದಲ ಸಭೆ ದೆಹಲಿಯ ಲೋಕ ಕಲ್ಯಾಣ ಮಾರ್ಗ್‌ದಲ್ಲಿರುವ ಪ್ರಧಾನಿಗಳ ಅಧಿಕೃತ ನಿವಾಸದಲ್ಲೆ ನಡೆಯಲಿದೆ.ಗ್ರಾಮೀಣರಿಗೆ ವಸತಿ ೧೦೦ ದಿನದ ಕಾರ್ಯಕ್ರಮ ಅನುಷ್ಠಾನ ಪ್ರಧಾನಿ ಮೋದಿ ಅವರ ಚೊಚ್ಚಲ ಸಂಪುಟ ಸಭೆಯಲ್ಲಿ ದೇಶದ ಗ್ರಾಮೀಣ ಜನರಿಗೆ ೨ ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಿಕೊಡುವ ತೀರ್ಮಾನ ಕೈಗೊಳ್ಳುವ ಮೂಲಕ ಗ್ರಾಮೀಣ ಜನರ ಬದುಕು ಸುಧಾರಿಸುವ ಕಾರ್ಯಕ್ರಮಗಳ ಅನುಷ್ಠಾನದ ಬದ್ಧತೆಯನ್ನು ಸರ್ಕಾರ ತೋರಲಿದೆ.
ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ದೇಶದ ಹಳ್ಳಿಗಳಲ್ಲಿ ವಾಸಿಸುವವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ೨ ಕೋಟಿ ಮನೆಗಳ ನಿರ್ಮಾಣದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಸಂಜೆ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಧಾನಿ ಅವರು ತಮ್ಮ ನೂರು ದಿನಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿ ಆ ಬಗ್ಗೆ ನೂತನ ಸಚಿವರುಗಳಿಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವರು ಎಂದು ಹೇಳಲಾಗಿದೆ.ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಸಹಾಯ ಧನವನ್ನು ಶೇ. ೫೦ ರಷ್ಟು ಹೆಚ್ಚಿಸುವ ಬಗ್ಗೆಯೂ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.ಈ ಎಲ್ಲದರ ಜತೆಗೆ ಮುಂದಿನ ಐದು ವರ್ಷಗಳಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬೇಕು, ವಿಕಸಿತ ಭಾರತದ ಗುರಿ ಸಾಧಿಸಲು ಜಾರಿ ಮಾಡಬೇಕಾದ ಕಾರ್ಯಕ್ರಮಗಳು, ಎಲ್ಲದರ ಬಗ್ಗೆಯೂ ಚರ್ಚೆ, ತೀರ್ಮಾನಗಳು ಆಗುತ್ತವೆ ಎಂದು ಹೇಳಲಾಗಿದೆ.
ಪ್ರಧಾನಿಯಾಗಿ ನಿನ್ನೆ ರಾತ್ರಿಯಷ್ಟೇ ಅಧಿಕಾರ ವಹಿಸಿಕೊಂಡು ನರೇಂದ್ರಮೋದಿ ಅವರು ಪ್ರಧಾನಿಯಾಗಿ ಮೂರನೇ ಅವಧಿಯ ಮೊದಲ ದಿನವೇ ದೇಶದ ಜನರು ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಸಭೆಯಲ್ಲಿ ಹತ್ತು ಹಲವು ವಿಚಾರಗಳ ಬಗ್ಗೆ ಮಂಥನ ನಡೆಸುವರು ಎಂದು ಹೇಳಲಾಗಿದೆ.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಲ್ಲ ಸಚಿವರುಗಳು ಭಾಗಿಯಾಗಲಿದ್ದಾರೆ.