ಕೆಲ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಸಿಗುತ್ತಿಲ್ಲ: ಅಶ್ರಫ್
ಬೆಂಗಳೂರು, ಜೂ.೯-ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಪಟ್ಟಿಯಿಂದ ಮುಸ್ಲಿಂ ಸಮುದಾಯದ ಕೆಲ ಪಂಗಡಗಳನ್ನು ಕೈ ಬಿಟ್ಟಿರುವುದರಿಂದ ಸಮುದಾಯಕ್ಕೆ ಸಮರ್ಪಕವಾಗಿ ಶೇ.೪ರಷ್ಟು ಇರುವ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಹೆಚ್ಚು ಜನಸಂಖ್ಯೆ ಇರುವಂತಹ ಕಚ್ಚಿ ಮೆನನ್, ನವಾಯತಿ, ಬೊಹ್ರ, ಸೈಯದ್, ಶೇಕ್, ಪಠಾಣ್, ಮೊಘಲ್, ಮಹದವಿ, ಕೊಂಕಣಿ ಅಥವಾ ಜಮಾಯತಿ ಮುಸ್ಲಿಮ್ ಪಂಗಡಗಳನ್ನು ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ ಸಮುದಾಯಕ್ಕೆ ಸಮರ್ಪಕವಾಗಿ ಶೇ.೪ರಷ್ಟು ಇರುವ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ ಎಂದರು.
ಭಾರತ ಸರಕಾರದ ನಾಗರಿಕ ಹುದ್ದೆಗಳು ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಮುಸ್ಲಿಮ್ ಸಮುದಾಯದ ಬಹುಪಾಲು ಅಭ್ಯರ್ಥಿಗಳು ಈ ಮೇಲಿನ ಪಂಗಡಗಳಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತಾರೆ. ಆದರೆ, ಇವರನ್ನು ಒಬಿಸಿ ಪಟ್ಟಿಯಿಂದ ಕೈ ಬಿಟ್ಟಿರುವುದರಿಂದ ಮೀಸಲಾತಿ ಕೇವಲ ತೋರ್ಪಡಿಕೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಶೇ.೪ರಷ್ಟು ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರಕಾರ ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಸದ್ಯ ಆ ಶೇ.೪ರಷ್ಟು ಮೀಸಲಾತಿ ಉಳಿದುಕೊಂಡಿದೆ.
ಆದರೆ, ಹಿಂದುಳಿದ ವರ್ಗಗಳ ಅಡಿಯಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಿಗದಿದ್ದರೆ, ಅವರು ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧೆ ಮಾಡಬೇಕಾಗುತ್ತದೆ. ಇದು ಮುಸ್ಲಿಮ್ ಸಮುದಾಯವನ್ನು ಸಾಮಾಜಿಕ ನ್ಯಾಯದಿಂದ ವಂಚಿಸಿದಂತಾಗುತ್ತದೆ ಎಂದು ಸೈಯದ್ ಅಶ್ರಫ್ ತಿಳಿಸಿದರು.
ಆದುದರಿಂದ, ರಾಜ್ಯ ಸರ್ಕಾರವು ಮುಸ್ಲಿಮರ ಮೀಸಲಾತಿಯನ್ನು ಪುನರ್ ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಮುಸ್ಲಿಮ್ ಸಮುದಾಯದಲ್ಲಿನ ಎಲ್ಲ ಪಂಗಡಗಳಿಗೂ ಹಿಂದುಳಿದ ವರ್ಗಗಳ ಅಡಿಯಲ್ಲಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ಅಥವಾ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ ಅವರು, ಈ ವಿಚಾರದಲ್ಲಿ ನಮ್ಮ ಸಮುದಾಯದ ಜನಪ್ರತಿನಿಧಿಗಳು ಯಾಕೆ ಮೌನ ವಹಿಸಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೇಮಕಕ್ಕೆ ಅಸಮಾಧಾನ: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್ ಅವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸೈಯದ್ ಅಶ್ರಫ್, ಈ ಹಿಂದೆ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರನ್ನು ನೇಮಕ ಮಾಡಿದಾಗ ಯಾರೊಬ್ಬರೂ ಪ್ರಶ್ನೆ ಮಾಡಿರಲಿಲ್ಲ.
ಏಕೆಂದರೆ, ಜಿ.ಎ.ಬಾವಾ ಅವರು ಧರಂಸಿಂಗ್ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ, ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆಯದ ನಿಸಾರ್ ಅಹ್ಮದ್ ನೇಮಕದ ಅಗತ್ಯವೇನು? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೆ ಅವರ ನೇಮಕಾತಿ ಆದೇಶವನ್ನು ರದ್ದು ಮಾಡಬೇಕು. ಎಲ್ಲ ಅಲ್ಪಸಂಖ್ಯಾತ ಸಮುದಾಯದ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರ ಜೊತೆ ಸಮಾಲೋಚನೆ ಮಾಡಿ, ಅಲ್ಪಸಂಖ್ಯಾತರ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಿ. ಅಲ್ಪಸಂಖ್ಯಾತರ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ನಾವು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ತರುವ ಮುನ್ನ, ಸರಕಾರ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿ ಎಂದು ಸೈಯದ್ ಅಶ್ರಫ್ ಹೇಳಿದರು.