ಕುಮಾರಸ್ವಾಮಿ ಸಹಿತ ರಾಜ್ಯದ ನಾಲ್ವರು ಸಚಿವರಾಗಿ ಪ್ರಮಾಣ ಸ್ವೀಕರ
ಬೆಂಗಳೂರು, ಜೂ.9-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದು, ಇಂದು ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯದ ನಾಲ್ವರು ಪ್ರಮಾಣ ವಚನ ಸ್ವೀಕರಿಸಿದರು.
ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
“ಬಿಜೆಪಿಯ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ – ಕಮಲ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಪೈಪೋಟಿಯ ನಡೆವೆಯೂ ಕಾಂಗ್ರೆಸ್‌ನ ಹೊಸ ಮುಖ ವಿನೋದ್ ಅಸೂಟಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಪ್ರಹ್ಲಾದ್ ಜೋಶಿ ಮತ್ತೊಮ್ಮೆ ಮೋದಿ ಸಂಪುಟ ಸೇರಿದ್ದಾರೆ. ಅವರು ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಡೀ ರಾಜ್ಯದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ 1.79ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸಿರುವ ಎನ್.ಡಿ.ಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣದಿಂದಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ 2,59,476 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇದೀಗ ಮತ್ತೊಮ್ಮೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಇಂದು ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.