ಕಳುವಾಗಿದ್ದ ಐಫೋನ್ ಪತ್ತೆ ವಿಡಿಯೋ ವೈರಲ್
ಬೆಂಗಳೂರು,ಜೂ.೮-ಕರ್ನಾಟಕದಿಂದ ಕೇರಳಕ್ಕೆ ವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರು ತಮ್ಮ ೧.೫ ಲಕ್ಷ ಬೆಲೆ ಬಾಳುವ ಐಫೋನ್ ಕಡಲತೀರದಲ್ಲಿ ಬಂಡೆಗಳ ನಡುವೆ ಕಳೆದುಕೊಂಡಿದ್ದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಆದರೆ ಪೊಲೀಸರು ಮತ್ತು ಜನರ ಸಹಾಯದಿಂದ ಕೇವಲ ೭ ಗಂಟೆಯಲ್ಲಿ ತಮ್ಮ ಐಫೋನ್ ಮರಳಿ ಪಡೆದಿದ್ದಾರೆ. ಮಹಿಳೆ ಈ ಕುರಿತು ವಿಡಿಯೋವನ್ನು ದಾಖಲಿಸಿದ್ದಾರೆ ಮತ್ತು ಅದನ್ನು ತನ್ನ ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ.
ಕರ್ನಾಟಕದ ಯುವತಿಯೊಬ್ಬಳು ಕೇರಳದ ವರ್ಕಲಾದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಸಮುದ್ರತೀರದಲ್ಲಿ ಬೃಹತ್ ಬಂಡೆಗಳ ನಡುವೆ ಆಕೆಯ ೧,೫೦,೦೦೦ ಮೌಲ್ಯದ ಐಫೋನ್ ಬಿದ್ದಿದೆ.
ಅವರು ತಕ್ಷಣ ತಾವು ತಂಗಿದ್ದ ಆಂಟಿಲಿಯಾ ಚಾಲೆಟ್ ರೆಸಾರ್ಟ್ ಸಿಬ್ಬಂದಿಯ ಸಹಾಯವನ್ನು ಯಾಚಿಸಿದ್ದಾರೆ.
ಅವರ ಮನವಿಗೆ ಸ್ಪಂದಿಸಿದ ರೆಸಾರ್ಟ್ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ, ಆದರೆ ಮೊಬೈಲ್ ಫೋನ್ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ನಂತರ, ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಹಾಯದಿಂದ ಸುದೀರ್ಘ ಏಳು ಗಂಟೆಗಳ ಕಾರ್ಯಾಚರಣೆಯ ನಂತರ ಕಡಲತೀರದಲ್ಲಿ ಬಂಡೆಗಳ ನಡುವೆ ಸಿಲುಕಿ ಬಿದ್ದಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ನ ಪತ್ತೆಮಾಡಿ ಹುಡುಕಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಇದುವರೆಗೆ ೧ ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಸುದೀರ್ಘ ಕಾರ್ಯಾಚರಣೆಯ ಸಮಯದಲ್ಲಿ ಸೆರೆಹಿಡಿಯಲಾದ ವೀಡಿಯೊವನ್ನು ರೆಸಾರ್ಟ್ ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬೃಹತ್ ಅಲೆಗಳು ಮತ್ತು ರಭಸದ ಗಾಳಿಯ ನಡುವೆ ಮೊಬೈಲ್ ಪತ್ತೆ ಮಾಡುವುದು ಎಷ್ಟೊಂದು ಕಷ್ಟಕರ ವಿಷಯವಾಗಿತ್ತು ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ.