ವಿಪಕ್ಷಕ ನಾಯಕನ ಸ್ಥಾನಕ್ಕೆ ರಾಹುಲ್ ಸೂಕ್ತ
ನವದೆಹಲಿ.ಜೂ. ೮- ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದಾರೆ ಎಂದು
ಕಾಂಗ್ರೆಸ್ ನಾಯಕ ಶಶಿ ತರೂರು ಹಾಡಿ ಹೊಗಳಿದ್ದಾರೆ.
ರಾಹುಲ್ ಮತ್ತು ಖರ್ಗೆ ದೇಶಾದ್ಯಂತ ಪ್ರಚಾರ ನಡೆಸಿದ್ದಾರೆ. ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಹಾಗಾಗಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆ ವಹಿಸುವುದು ಸೂಕ್ತ. ಈ ವಿಚಾರದಲ್ಲಿ
ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಶಶಿ ತರೂರು ತಿಳಿಸಿದ್ದಾರೆ.
ಮೊನ್ನೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ
ಉತ್ತಮ ಫಲಿತಾಂಶ ಸಿಗಲು ದೊಡ್ಡ ಪಾತ್ರ ನಿರ್ವಹಿಸಿದ್ದರು.
ರಾಹುಲ್ ಗಾಂಧಿಗೆ ವಿರೋಧ ಪಕ್ಷದ ಸ್ಥಾನ ಸಿಗಬೇಕೆಂದು ಬಲವಾದ ಕೂಗು ಕೇಳಿ ಬಂದಿದೆ. ಕೈ ನಾಯಕರು
ರಾಹುಲ್ ಗಾಂಧಿ ಪರ ಒಲವು ಹೊಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಸಂಸದೀಯ ಪಕ್ಷದ ಸಭೆಯಲ್ಲಿ
ಚರ್ಚೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರಾಹುಲ್ ಗಾಂಧಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಇದೆ.