ಮೋದಿ ಪಟ್ಟಾಭಿಷೇಕಕ್ಕೆ ಭರ್ಜರಿ ತಯಾರಿ
ನವದೆಹಲಿ,ಜೂ.೮-ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ನಾಳೆ ಸಂಜೆ ೭.೧೫ಕ್ಕೆ ಪ್ರಮಾಣ ವಚನ ಸ್ವೀಕಾರದ ಐತಿಹಾಸಿಕ ಕ್ಷಣಕ್ಕೆ ರಾಷ್ಟ್ರಪತಿ ಭವನ ಸಕಲ ಸಿದ್ಧತೆ ಮಾಡಿಕೊಂಡಿದೆ.
ನೆರೆಯ ದೇಶಗಳ ಮುಖ್ಯಸ್ಥರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡುವ ಐತಿಹಾಸಿಕ ಕ್ಷಣಕ್ಕೆ ಭಾಗಿಯಾಗಲಿದ್ದಾರೆ. ಮರುದಿನ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ಪ್ರಧಾನಿ ಜೊತೆಗೆ ಎನ್ ಡಿಎ ಮಿತ್ರಪಕ್ಷಗಳ ಹಲವು ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಯಾರೆಲ್ಲಾ ನರೇಂದ್ರ ಮೋದಿ ಅವರ ಸಂಪುಟಕ್ಕೆ ಸೇರಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಮುಯಿಝು ಭಾರತಕ್ಕೆ ಬಂದರೆ, ಎರಡು ಸಾಂಪ್ರದಾಯಿಕ ಪಾಲುದಾರರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಮುಯಿಝು ಅವರ ಹಿಂದಿನವರಲ್ಲಿ ಒಬ್ಬರಾದ ಅಬ್ದುಲ್ಲಾ ಯಮೀನ್ ಅವರು ಮೇ ೨೦೧೪ ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.
ನವೆಂಬರ್ ೨೦೨೩ ರಲ್ಲಿ ಮುಯಿಝು ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಮಾಲ್ಡೀವ್ಸ್ ಸಂಬಂಧಗಳು ಹದಗೆಟ್ಟವು. ಅವರು ದೇಶದಿಂದ ತನ್ನ ಮಿಲಿಟರಿ ಸಿಬ್ಬಂದಿ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಮನವಿ ಮಾಡಿದ್ದರು.
ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಸಾರ್ವತ್ರಿಕ ಚುನಾವಣೆಯಲ್ಲಿ ೨೯೩ ಸ್ಥಾನಗಳೊಂದಿಗೆ ಜಯಗಳಿಸಿದೆ, ಇಂಡಿಯಾ ಮೈತ್ರಿಕೂಟ ೨೩೪ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಯಾರೆಲ್ಲಾ ವಿದೇಶಿ ಮುಖ್ಯಸ್ಥರು ಭಾಗಿ
ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೀಶೆಲ್ಸ್ ಸರ್ಕಾರಗಳ ಮುಖ್ಯಸ್ಥರು ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭ ಭಾಗವಹಿಸುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ತಮ್ಮ ಉಪಸ್ಥಿತಿ ಖಚಿತಪಡಿಸಿದ್ದಾರೆ.
ಪುಷ್ಪ ಕುಮಾರ್ ದಹಲ್ ಮತ್ತು ರನಿಲ್ ವಿಕ್ರಮಸಿಂಘೆ ಜೂನ್ ೯ ರಂದು ದೆಹಲಿಗೆ ಆಗಮಿಸಲಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇಂದು ದೆಹಲಿಗೆ ಹಾರುವ ಸಾಧ್ಯತೆಯಿದೆ.
ಜೂನ್ ೯ ರಂದು ಪ್ರಧಾನಿಯಾಗಿ ಪ್ರಮಾಣವನ ಸ್ವೀಕಾರ ಮಾಡಿದ ಬೆನ್ನಲ್ಲೇ ಮರುದಿನ ವಿವಿಧ ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.