ಕಿವೀಸ್ ಕಿವಿ ಹಿಂಡಿದ ಅಫ್ಘಾನಿಸ್ತಾನ
ಗಯಾನಾ,ಜೂ.೮- ಆಲ್ರೌಂಡ್ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ೮೪ ರನ್ಗಳಿಂದ ಗೆದ್ದು ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ಆಘಾತ ನೀಡಿದೆ. ಇದೇ ಮೊದಲ ಬಾರಿಗೆ ಟಿ೨೦ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಇತರೆ ತಂಡಗಳಿಗೂ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.ಇಲ್ಲಿನ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೫೯ ರನ್ಕ ಲೆ ಹಾಕಿತು. ನ್ಯೂಜಿಲೆಂಡ್ ತಂಡ ೧೫.೨ ಓವರ್‌ಗಳಲ್ಲಿ ಕೇವಲ ೭೫ ರನ್‌ಗಳಿಗೆ ಸರ್ವಪತನ ಕಂಡಿತು.ಅಫ್ಘಾನಿಸ್ತಾನ ಪರ ಆರಂಭಿಕರಾದ ರೆಹಮಾನ್‌ಹುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಮೊದಲ ವಿಕೆಟ್‌ಗೆ ೧೦೩ ರನ್‌ಗಳ ಭರ್ಜರಿ ಆರಂಭ ನೀಡಿದರು.ಜದ್ರಾನ್ (೪೪ ರನ್), ಅಜಮತ್‌ಹುಲ್ಲಾ (೨೨ರನ್) ವೇಗಿ ಹೆನ್ರಿಗೆ ವಿಕೆಟ್ ಒಪ್ಪಿಸಿದರು. ೫೬ ಎಸೆತಗಳಲ್ಲಿ ೮೦ ರನ್ ಹೊಡೆದ ರೆಹಮಾನ್‌ಹುಲ್ಲಾ ಗುರ್ಬಾಜ್ ಬೌಲ್ಟ್‌ಗೆ ಬಲಿಯಾದರು.ಮೊಹ್ಮದ್ ನಬಿ ೦, ನಾಯಕ ರಶೀದ್ ಖಾನ್ ೬, ಕರೀಮ್ ೧, ಗುಲ್ಬದ್ದೀನ್ ನೈಬ್ ೦, ಜದ್ರಾನ್ ೦ ರನ್ ಹೊಡೆದರು.ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್, ಮಾಟ್ ಹನ್ರಿ ತಲಾ ೨ ವಿಕೆಟ್, ಫರ್ಗ್ಯೂಸನ್ ೧ ವಿಕೆಟ್ ಪಡೆದರು.೧೬೦ ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಎಡಗೈ ವೇಗಿ ಫಾಜಲ್‌ಹಕ್ ಹಾಗು ಸ್ಪಿನ್ನರ್ ರಶೀದ್ ಖಾನ್ ದಾಳಿಗೆ ತತ್ತರಿಸಿತು.ಫಿನ್ ಆಲೆನ್(೦), ಡೆವೊನ್ ಕಾನ್ವೆ (೮), ಡ್ಯಾರಿಲ್ ಮಿಚೆಲ್ (೫ರನ್) ಹಾಗೂ ಮಾಟ್ ಹೆನ್ರಿ (೧೨ರನ್) ಫಾಜಲ್‌ಹಕ್‌ಗೆ ವಿಕೆಟ್ ಒಪ್ಪಿಸಿದರು.ನಾಯಕ ಕೇನ್ ವಿಲಿಯಮ್ಸನ್(೯), ಚಾಪ್‌ಮನ್ (೪), ಮೈಕಲ್ ಬ್ರೇಸ್‌ವೆಲ್ (೦), ಲಾಕಿ ಫರ್ಗ್ಯೂಸನ್ (೨) ರಶೀದ್ ಖಾನ್‌ಗೆ ಬಲಿಯಾದರು.
ಗ್ಲೇನ್ ಫಿಲೀಪ್ಸ್ (೧೮) ನಬಿ ವಿಕೆಟ್ ಒಪ್ಪಿಸಿದರು.ಅಫ್ಘಾನಿಸ್ತಾನ ಪರ ಫಾಜಲ್‌ಹಕ್ ೧೭ಕ್ಕೆ ೪, ರಶೀದ್ ಖಾನ್ ೧೭ಕ್ಕೆ ೪, ನಬಿ ೧೬ಕ್ಕೆ ೨ ವಿಕೆಟ್ ಪಡೆದರು.