ಸಂಸತ್ ಆವರಣದಲ್ಲಿ ಗಣ್ಯರವಿಗ್ರಹ ತೆರವಿಗೆ ಕೈ ಆಕ್ರೋಶ
ನವದೆಹಲಿ,ಜೂ.೭-ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಅವರ ಪ್ರತಿಮೆಗಳನ್ನು ಸಂಸತ್ತಿನ ಆವರಣದಿಂದ ತೆರೆವುಗೊಳಿಸಿದ ಬಗ್ಗೆ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಇದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಖಂಡಿಸಿ ಇದು ಅನುಚಿತ ಹೆಜ್ಜೆ ಇದೊಂದು ಕ್ರೌರ್ಯದ ಕೃತ್ಯ ಎಂದು ಆರೋಪಿಸಿದ್ದಾರೆ.
ವಿರೋಧ ಪಕ್ಷಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸುವ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಸಂಸತ್ ಭವನದ ಆವರಣದಿಂದ ಮಹಾತ್ಮ ಗಾಂಧಿ, ಅಂಬೇಡ್ಕರ್, ಶಿವಾಜಿ ಅವರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ರೀತಿಯ ತಂತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಅಸ್ಥಿರ ಸರ್ಕಾರದ ಪತನವನ್ನು ತಡೆಯಲು ಸಾಧ್ಯವಿಲ್ಲ.ಪ್ರತಿಮೆಗಳ ಸ್ಥಳಾಂತರ ಕುರಿತು ಲೋಕಸಭೆಯ ಕಚೇರಿ ನೀಡಿರುವ ವಿವರಣೆ ಸಂಪೂರ್ಣ ಹುಸಿಯಾಗಿದ್ದು, ಯಾವುದೇ ರಾಜಕೀಯ ಪಕ್ಷದ ಜತೆ ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ದೂರಿದ್ದಾರೆ. ಸಂಸತ್ ಭವನದ ವಿವಿಧ ಭಾಗಗಳಲ್ಲಿ ಪ್ರತಿಮೆಗಳು ನೆಲೆಗೊಂಡಿರುವುದರಿಂದ ಸಂಸತ್ತಿಗೆ ಭೇಟಿ ನೀಡುವವರು ಅವುಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಲೋಕಸಭೆ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿರುವುದು ಗಮನಾರ್ಹವಾಗಿದೆ, ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧಿ ಮತ್ತು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸಂಸತ್ ಭವನದ ಮುಂಭಾಗದ ಸ್ಥಳದಿಂದ ತೆಗೆದುಹಾಕಲಾಗಿದೆ. ಇದು ಅನುಚಿತವಾಗಿದೆ ಎಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ ಪ್ರಶ್ನೆ ಎತ್ತಿದ್ದಾರೆ. ಮಹಾರಾಷ್ಟ್ರದ ಮತದಾರರು ಬಿಜೆಪಿ ಪರವಾಗಿ ಮತ ಹಾಕಿಲ್ಲ, ಹಾಗಾಗಿ ಶಿವಾಜಿ ಮತ್ತು ಅಂಬೇಡ್ಕರ್ ಪ್ರತಿಮೆಗಳನ್ನು ಸಂಸತ್ತಿನ ಮೂಲ ಸ್ಥಳದಿಂದ ತೆಗೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಸಿಟ್ಟಾಗಿದೆ. ಸಂಸತ್ ಆವರಣದಲ್ಲಿರುವ ಮಹನೀಯರ ಪ್ರತಿಮೆಗಳ ಸ್ಥಳಾಂತರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರಂತಹ ವಿಗ್ರಹಗಳ ತೆರವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ, ಬಿಆರ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಅವರ ಪ್ರತಿಮೆಗಳನ್ನು ಸ್ಥಳಾಂತರಿಸಲಾಗಿದೆ. ಸಂಸತ್ತಿನ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ಭೂದೃಶ್ಯದ ಆಧುನೀಕರಣಕ್ಕಾಗಿ ಎಲ್ಲಾ ಪ್ರತಿಮೆಗಳನ್ನು ಆವರಣದಲ್ಲಿ ಸ್ಥಳಾಂತರಿಸಲಾಗುತ್ತಿದೆ. ಇದರ ಭಾಗವಾಗಿ, ಹಳೆಯ ಸಂಸತ್ ಕಟ್ಟಡ ಮತ್ತು ಸಂಸತ್ತಿನ ಗ್ರಂಥಾಲಯದ ನಡುವಿನ ಉದ್ಯಾನದಲ್ಲಿ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಸಹ ಸ್ಥಳಾಂತರಿಸಲಾಯಿತು. ಇದರೊಂದಿಗೆ ಸಂಸತ್ತಿನ ಆವರಣದಲ್ಲಿರುವ ಎಲ್ಲ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಗಳು ಈಗ ಒಂದೇ ಸ್ಥಳದಲ್ಲಿವೆ.