ಕೋರ್ಟ್‌ನಲ್ಲಿ ಸ್ಫೋಟ: ಐವರಿಗೆ ಗಾಯ
ಕ್ಯಾಲಿಫೋರ್ನಿಯಾ,ಸೆ.೨೬-ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸಾಂತಾ ಮಾರಿಯಾದಲ್ಲಿರುವ ನ್ಯಾಯಾಲಯದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ಸ್ಫೋಟವನ್ನು ಉಂಟು ಮಾಡಿದ ಆರೋಪದ ಮೇಲೆ ೨೦ ವರ್ಷದ ನಥಾನಿಯಲ್ ಮೆಕ್‌ಗುಯಿರ್ ಎಂದು ಶೆರಿಫ್ ಕಚೇರಿಯಿಂದ ಗುರುತಿಸಲಾದ ಶಂಕಿತನನ್ನು ಬಂಧಿಸಲಾಗಿದೆ.ನ್ಯಾಯಾಲಯದ ಒಳಗೆ ಶಂಕಿತ ಆರೋಪಿ ಸ್ಫೋಟಕ ಸಾಧನವನ್ನು ಎಸೆದಿದ್ದಾನೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದ ಸಾಂತಾ ಮಾರಿಯಾ ಕೋರ್ಟ್‌ಹೌಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಬಾರ್ಬರಾ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಸಾಂತಾ ಬಾರ್ಬರಾ ಕೌಂಟಿಯ ಸಾಂತಾ ಮಾರಿಯಾ ಕೋರ್ಟ್‌ಹೌಸ್‌ನಲ್ಲಿ ಬುಧವಾರ ಬೆಳಗ್ಗೆ ೮:೪೮ ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಸಾಂತಾ ಮಾರಿಯಾ ಕೋರ್ಟ್‌ಹೌಸ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ ಎಂದು ಶೆರಿಫ್ ಕಚೇರಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ. ಆ ಪ್ರದೇಶಕ್ಕೆ ಹೋಗುವುದು ಸುರಕ್ಷಿತವಲ್ಲ ಸಧ್ಯಕ್ಕೆ ಆ ಪ್ರದೇಶದಲ್ಲಿ ಓಡಾಟ ನಡೆಸಬೇಡಿ ಎಚ್ಚರಿಕೆ ನೀಡಿದೆ.ಘಟನೆಯ ಕುರಿತು ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.ಐದು ಜನರಿಗೆ ಪ್ರಾಣಾಪಾಯವಿಲ್ಲದ ಗಾಯಗಳಾಗಿವೆ ಎಂದು ಕಚೇರಿ ವರದಿ ನೀಡಿದೆ. ಈ ಸಂದರ್ಭದಲ್ಲಿ, ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ ಮತ್ತು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಮುಂದಿನ ಕ್ರಮ ಕುರಿತು ಚಿಂತನೆ ನಡೆಸಿರುವುದಾಗಿ ಎಂದು ಟ್ವಿಟರ್‌ನಲ್ಲಿ ತಿಳಿಸಿದೆ. ದಿನದ ಮಟ್ಟಿಗೆ ಕಚೇರಿ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.