ರಾಹುಲ್ ಪಾಸ್‌ಪೋರ್ಟ್ ರದ್ಧತಿಗೆ ಸಂಸದ ಜೋಷಿ ಆಗ್ರಹ
ಜೈಪುರ,ಸೆ.೨೫:ಮೀಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಪಾಸ್‌ಪೋರ್ಟ್ ರದ್ದುಗೊಳಿಸಬೇಕೆಂದು ಬಿಜೆಪಿ ಸಂಸದ ಸಿ.ಪಿ ಜೋಶಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ರಾಹುಲ್‌ಗಾಂಧಿ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಿಖ್ ಸಮುದಾಯಗಳ ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಮೀಸಲಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ರಾಹುಲ್ ಅವರ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಬಿಜೆಪಿ ಒತ್ತಡ ಹೇರಿದೆ.
ಪ್ರತಿಪಕ್ಷ ನಾಯಕನ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಹೇಳಿಕೆಗಳು ಕೇವಲ ರಾಜಕೀಯವಲ್ಲ, ದೇಶ ವಿರೋಧಿ ಮನಃಸ್ಥಿತಿಯ ಭಾಗವಾಗಿದ್ದು, ಅವರ ಹೇಳಿಕೆಗಳಿಂದ ದೇಶದ ಸ್ಥಿರತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ತಕ್ಷಣ ಅವರ ಪಾಸ್‌ಪೋರ್ಟ್ ರದ್ದುಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ರಾಹುಲ್‌ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಅಮೆರಿಕ್ಕೆ ೪ ದಿನಗಳ ಕಾಲ ಪ್ರವಾಸ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಜತೆಸಂವಾದದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಸಂವಾದದಲ್ಲಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮೀಸಲಾತಿ ಮಿತಿಯನ್ನು ಶೇ. ೫೦ಕ್ಕಿಂದ ಮೀರಿ ವಿಸ್ತರಿಸಲಿದ್ದೇವೆ ಎಂದು ರಾಹುಲ್ ಸಮಜಾಯಿಷಿ ಹೇಳಿಕೆ ನೀಡಿದ್ದರು.