ಮಹಿಳೆ ಸಾವು: ಪತಿ, ಮಾವ ಸೆರೆ
ಪುಣೆ,ಸೆ.೨೫-ಮಹಾರಾಷ್ಟ್ರದ ಪುಣೆಯಲ್ಲಿ ೨೪ ವರ್ಷದ ಮಹಿಳೆಯೊಬ್ಬರು ಮನೆಯಲ್ಲೇ ರಹಸ್ಯವಾಗಿ ಗರ್ಭಪಾತಕ್ಕೆ ಒಳಗಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆಯ ನಂತರ ಮಹಿಳೆಯ ಪತಿ ಮತ್ತು ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಅತ್ತೆ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪೋಲೀಸರ ಪ್ರಕಾರ, ನಾಲ್ಕು ತಿಂಗಳ ಭ್ರೂಣವನ್ನು ಕುಟುಂಬದ ಜಮೀನಿನಲ್ಲಿ ಹೂಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಗರ್ಭಪಾತ ಮಾಡಲು ಕರೆಸಿಕೊಂಡಿದ್ದ ಖಾಸಗಿ ವೈದ್ಯರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಗೆ ೨೦೧೭ರಲ್ಲಿ ವಿವಾಹವಾಗಿತ್ತು. ಅವರಿಗೆ ಈಗಾಗಲೇ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಮೂರನೇ ಬಾರಿಗೆ ತಾಯಿಯಾಗಲು ಹೊರಟಿದ್ದಳು. ಆದರೆ ಭ್ರೂಣ ಹೆಣ್ಣು ಎಂದು ತಿಳಿದ ಮನೆಯವರು ಮನೆಯಲ್ಲಿಯೇ ರಹಸ್ಯವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಭಾನುವಾರ ತೀವ್ರ ರಕ್ತಸ್ರಾವದಿಂದ ಮಹಿಳೆಯ ಸ್ಥಿತಿ ಹದಗೆಟ್ಟಿತ್ತು. ಮರುದಿನ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಇಂದಾಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.