ಗಾಯಕ ಜಸರಾಜ್ ಪತ್ನಿ ಮಧುರಾ ನಿಧನ
ಮುಂಬೈ,ಸೆ.೨೫-ಖ್ಯಾತ ದಿ.ಗಾಯಕ ಪಂಡಿತ್ ಜಸರಾಜ್ ಅವರ ಪತ್ನಿ ಮಧುರಾ ಜಸರಾಜ್ ನಿಧನರಾಗಿದ್ದಾರೆ. ಅವರು ಇಂದು ಮುಂಜಾನೆ ತಮ್ಮ ೮೬ ವಯಸ್ಸಿನಲ್ಲಿ ಮುಂಬೈನ ವರ್ಸೋವಾದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ .
ಮಧುರಾ ಭಾರತೀಯ ಚಲನಚಿತ್ರೋದ್ಯಮದ ಖ್ಯಾತ ನಿರ್ಮಾಪಕ ವಿ. ಶಾಂತಾರಾಮ್ ಅವರ ಪುತ್ರಿ. ಮಧುರಾ ಜಸರಾಜ್ ೧೯೬೨ ರಲ್ಲಿ ಪಂಡಿತ್ ಜಸರಾಜ್ ಅವರನ್ನು ವಿವಾಹವಾಗಿದ್ದರು. ಅವರು ತಮ್ಮ ಮಕ್ಕಳಾದ ದುರ್ಗಾ ಜಸರಾಜ್ ಮತ್ತು ಶ್ರೀರಂಗ್ ದೇವ್ ಪಂಡಿತ್ ಅವರನ್ನು ಅಗಲಿದ್ದಾರೆ.
ಮಧುರಾ ಜಸ್ರಾಜ್ ಸ್ವತಃ ನಿರ್ದೇಶಕಿ, ಲೇಖಕಿ, ನೃತ್ಯ ಸಂಯೋಜಕಿ ಮತ್ತು ನಿರ್ಮಾಪಕಿಯಾಗಿದ್ದು, ಮರಾಠಿ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಸಂರಕ್ಷಿಸುವ ಮತ್ತು ಪ್ರಚಾರ ಮಾಡುವಲ್ಲಿ ಮಧುರಾ ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೦೯ ರಲ್ಲಿ, ಮಧುರಾ ಅವರು ತಮ್ಮ ಪತಿ ಖ್ಯಾತ ಗಾಯಕ ಪಂಡಿತ್ ಜಸರಾಜ್ ಅವರು ಕುರಿತು ಸಂಗೀತ ಮಾರ್ತಾಂಡ್ ಪಂಡಿತ್ ಜಸರಾಜ್’ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ.ತಮ್ಮ ತಂದೆ ವಿ.ಶಾಂತಾರಾಮ ಅವರ ಜೀವನ ಚರಿತ್ರೆಯನ್ನು ಜೊತೆಗೆ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ.
೨೦೧೦ ರಲ್ಲಿ ಅವರು ಮರಾಠಿ ಚಿತ್ರ ಆಯಿ ತುಜಾ ಆಶೀರ್ವಾದ್ ನಿರ್ದೇಶಿಸಿದ್ದಾರೆ.ಅವರ ನಿಧನಕ್ಕೆ ಸಂಗೀತ ಲೋಕದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.