ಇಸ್ರೆಲ್ ವೈಮಾನಿಕ ದಾಳಿ: ಹೆಜ್ಬುಲ್ಲಾ ಕಮಾಂಡರ್ ಹತ್ಯೆ
ಬೈರುತ್,ಸೆ.೨೬- ದಹಿಯೇ ಉಪನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಇಬ್ರಾಹಿಂ ಕುಬೈಸಿ ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಖಚಿತಪಡಿಸಿವೆ.
ವೈಮಾನಿಕ ದಾಳಿಯಲ್ಲಿ ಕನಿಷ್ಠ ಆರು ಮಂದಿ ನಾಗರಿಕರು ಹತ್ಯೆಯಾಗಿದ್ದು ೧೫ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ವರದಿ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಲೆಬನಾನ್‌ನಲ್ಲಿ ನೂರಾರು ಜೀವ ಬಲಿತೆಗೆದುಕೊಂಡಿದೆ
ಲೆಬನಾನ್‌ನಲ್ಲಿ ಕಳೆದ ‘ಹಲವು ದಿನಗಳಿಂದ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು ಹೊಸದಾಗಿ ಇಸ್ರೇಲ್ ಸೇನೆ ನಡೆಸಿದ ರಾಕೆಟ್ ಮತ್ತು ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ ಮಾಡಲಾಗಿದೆ ಎಂದು ಸೇನೆ ಹೇಳಿದೆ.
ಉಗ್ರಗಾಮಿ ಗುಂಪು ಹೈಫಾ, ಸಫೆದ್ ಮತ್ತು ನಜರೆತ್ ಸೇರಿದಂತೆ ಉತ್ತರ ಇಸ್ರೇಲಿ ನಗರಗಳಲ್ಲಿ ಸುಮಾರು ೩೦೦ ರಾಕೆಟ್ ಉಡಾವಣೆ ಮಾಡಿದ ಪರಿಣಾಮ ಪ್ರಮುಖ ಕಮಾಡಂರ್ ಹತ್ಯೆಯಾಗಿದ್ದಾರೆ.
ಇಸ್ರೇಲಿ ವೈಮಾನಿಕ ದಾಳಿ ಆರಂಭವಾಗುತ್ತಿದ್ದಂತೆ ಹಲವು ನಗರಗಳಲ್ಲಿ ಸೈರನ್ ಮೊಳಗುತ್ತಿದ್ದಂತೆ ಹಲವು ಮಂದಿ ರಕ್ಷಣೆಗಾಗಿ ಟ್ಯಾಂಕರ್ ಮತ್ತು ಅಡಗುತಾಣಗಳಲ್ಲಿ ಬಚ್ಚಿಟ್ಟುಕೊಂಡರು ಎಂದು ಹೇಳಲಾಗಿದ್ದು ಈ ವೇಳೆ ವೈಮಾನಿಕ ದಾಳಿಯಲ್ಲಿ ಪ್ರಮುಖ ಕಮಾಂಡರ್ ಇಬ್ರಾಹಿಂ ಕುಬೈಸಿ ಹತ್ಯೆಯಾಗಿದ್ದಾರೆ.
ಹೆಜ್ಬೊಲ್ಲಾದ ಕ್ಷಿಪಣಿ ಕಾರ್ಯಾಚರಣೆಗಳಲ್ಲಿ ಇಬ್ರಾಹಿಂ ಕುಬೈಸಿ ಭಾಗಿಯಾಗಿದ್ದ. ಜೊತೆಗೆ ಇಸ್ರೇಲ್‌ಗೆ ಕಂಟಕವಾಗಿದ್ದ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕಮಾಂಡರ್ ಹತ್ಯೆಯಾಗಿದ್ದಾರೆ.
ಇಬ್ರಾಹಿಂ ಕುಬೈಸಿ ಸಾವುನ್ನು ಹೆಜ್ಬುಲ್ಲಾ ಖಚಿತಪಡಿಸಿದ್ದು “ಜೆರುಸಲೆಮ್‌ಗೆ ಹೋಗುವ ಹಾದಿಯಲ್ಲಿ” ಅವರನ್ನು ಹುತಾತ್ಮ ಎಂದು ವಿವರಿಸುವ ಹೇಳಿಕೆ ಬಿಡುಗಡೆ ಮಾಡಿದೆ. ಇಸ್ರೇಲಿ ಪಡೆಗಳಿಂದ ಕೊಲ್ಲಲ್ಪಟ್ಟ ಹೋರಾಟಗಾರರಿಗೆ ಹುತಾತ್ಮ ಪದ ಬಳಸಲಾಗುತ್ತಿದೆ.
ಇಬ್ರಾಹಿಂ ಕುಬೈಸಿ ೧೯೮೦ ರ ದಶಕದಲ್ಲಿ ಹೆಜ್ಬುಲ್ಲಾ ಸಂಘಟನೆ ಸೇರಿದ್ದರು ನಿಖರ ಕ್ಷಿಪಣಿ ಮತ್ತು ರಾಕೆಟ್ ದಾಳಿಗೆ ಹೆಸರಾಗಿದ್ದರು. ಇಸ್ರೇಲ್ ವಿರುದ್ಧ ಹಿಜ್ಬುಲ್ಲಾದ ಮಿಲಿಟರಿ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.
ಹಿರಿಯ ಮಿಲಿಟರಿ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಹಿಜ್ಬುಲ್ಲಾದ ೨೦೦೦ ಮೌಂಟ್ ಡೋವ್ ಕಾರ್ಯಾಚರಣೆಯಲ್ಲಿ ಇಬ್ರಾಹಿಂ ಕುಬೈಸಿ ಪ್ರಮುಖ ಪಾತ್ರ ವಹಿಸಿದ್ದರು, ಇದರಲ್ಲಿ ಮೂವರು ಇಸ್ರೇಲಿ ಸೈನಿಕರ ಅಪಹರಣ ಸೇರಿತ್ತು. ಸೈನಿಕರು ನಂತರ ಸಾವನ್ನಪ್ಪಿದ್ದರು ಮತ್ತು ಅವರ ದೇಹಗಳನ್ನು ೨೦೦೪ ರ ಕೈದಿಗಳ ವಿನಿಮಯದಲ್ಲಿ ಹಿಂತಿರುಗಿಸಲಾಗಿತ್ತು.