ಕೃಷಿಕ ಸಮಾಜ ರೈತರ ಸಂಪರ್ಕ ಸೇತು: ಎನ್ ಚಲುವರಾಯಸ್ವಾಮಿ
ಬೀದರ. ಜೂ.30: ಕೃಷಿಕ ಸಮಾಜ ಸರ್ಕಾರ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ಅವರು ಶನಿವಾರ ಬೀದರ ನಗರದಲ್ಲಿ ಜಿಲ್ಲಾ ಕೃಷಿಕ ಸಮಾಜದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ರೈತರ ಬೌದ್ದಿಕ ಸಾಮಥ್ರ್ಯ ಅಭಿವೃದ್ಧಿಗೆ ವಿವಿಧ ಚಟುವಟಿಕೆ ನಡೆಸುತ್ತಿದ್ದು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಕೃಷಿಕ ಸಮಾಜ ರಾಜ್ಯದಲ್ಲಿ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ 5.54 ಕೋಟಿ ರೂ. ತಾಲ್ಲೂಕು ಕಟ್ಟಡಗಳಿಗೆ 8.14 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಕೃಷಿ ಸಚಿವರು ಹೇಳಿದರು.
ಜಗತ್ತಿನ ಆಹಾರ ಕೊರತೆ ನೀಗಿಸಲು ರೈತರು ದುಡಿಯುತ್ತಿದ್ದು ಅವರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು ,ವೈಜ್ಞಾನಿಕ ಬಲೆ ನಿಗಧಿಯಾಗಬೇಕು. ರೈತರ ಹಿತಕ್ಕಾಗಿ 5 ಲಕ್ಷದ ವರಗೆ ಬಡ್ಡಿ ರಹಿತ ಸಾಲ, ಹಾಲಿಗೆ ಪ್ರತಿ ಲೀ 5 ರೂ ಸಬ್ಸಿಡಿ ನೀಡಲಾಗುತ್ತಿದೆ. ನಾವು ನೀಡಿದ್ದ ಗ್ಯಾರಂಟಿ ಯೋಜನೆಗಳೆಲ್ಲವನ್ನು 1 ವರ್ಷದೊಳಗೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ಈ ವರ್ಷವೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಭಾಗ್ಯ ಬೀದರ್ ಸೇರಿದಂತೆ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ ಎಂದ ಅವರು ರಾಜ್ಯದಲ್ಲಿ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲದಂತೆ ನಿಭಾಯಿಸಲಾಗುತ್ತಿದೆ ಎಂದರು
ಬೀದರ್ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ,ಜೈವಿಕ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರು ಮಾತನಾಡಿ, ಕೃಷಿಕರು ಅನ್ನದಾತರು ಅವರಿಗೆ ಎಷ್ಟು ಕಾರ್ಯಕ್ರಮ ಕೊಟ್ಟರು ಕಡಿಮೆ ಇದೆ ನಮ್ಮದು ರೈತಪರ ಸರ್ಕಾರ ಇರುವುದರಿಂದ ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಕೃಷಿಕ ಸಮಾಜದ ಕಟ್ಟಡ ಉದ್ಘಾಟನೆಮಾಡುತ್ತಿರುವುದಕ್ಕೆ ತುಂಭಾ ಸಂತೋಷವಾಗುತ್ತಿದೆ ಕೃಷಿಕ ಸಮಾಜದಿಂದ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹೀಂಖಾನ್ ಅವರು ಮಾತನಾಡಿ, ಇಂದು ರೈತರ ಸಮಸ್ಯೆಗಳ ಕುರಿತು ಕೃಷಿ ಸಚಿವರೊಂದಿಗೆ ಸಭೆ ಮಾಡಲಾಗಿದೆ. ಇದರಲ್ಲಿ ಸುಮಾರು ರೈತರ ವಿಷಯಗಳ ಕುರಿತು ಚರ್ಚೆಗಳನ್ನು ಮಾಡಲಾಯಿತು. ನಮ್ಮದು ರೈತಪರ ಸರ್ಕಾರ ನಾನು ಮತ್ತು ಅರಣ್ಯ ಸಚಿವರು ಯಾವಾಗಲೂ ನಿಮ್ಮೊಂದಿಗೆ ಇದ್ದೆವೆ. ಗಾಂಧಿಗಂಜ್ ಮುನಿಮ್ ಮತ್ತು ಹಮಾಲ ಜನರ ಪರವಾಗಿ ನಾವು ಇದ್ದೆವೆ ಎಂದು ಹೇಳಿದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಮಾತನಾಡಿ, ನನ್ನ ಕ್ಷೇತ್ರ ಮನ್ನಾಖೆಳ್ಳಿಯಲ್ಲಿ ಬಿ.ಎಸ್ಸಿ. ಅಗ್ರಿ ಕಲೇಜು ಮಂಜೂರು ಮಾಡಬೇಕು ಮತ್ತು ಸಾವಯವ ಕೃಷಿಗೆ ಒತ್ತು ನೀಡಬೇಕು.ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಸಮಸ್ಯೆಗಳನ್ನು ಎದುರಿಸಬೇಕು ಎಂದು ಹೇಳಿದರು.
ಬೀದರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಕೃಷಿ ಸಚಿವರ ಅಮೃತ ಹಸ್ತದಿಂದ ಕೃಷಿಕ ಸಮಾಜದ ಕಟ್ಟಡದ ಉದ್ಘಾಟನೆಯಾಗಿದೆ. ತಾಲ್ಲೂಕು ಮಟ್ಟದಲ್ಲಿ ಬಹಳ ಕಡೆ ಕೃಷಿಕ ಸಮಾಜದ ಕಟ್ಟಡಗಳು ಇಲ್ಲ ಅವುಗಳಿಗೆ ಜಾಗ ನೀಡಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧ್ಯಕ್ಷರಾದ ಮೊಹಮ್ಮದ್ ಗೌಸ್. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾದ ಸಿ.ಪಾಪಣ್ಣ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಪಾಟೀಲ ಮಾಡಗೊಳ, ಬೀದರ ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರತೇಂದ್ರನಾಥ ಸೂಗೂರ ಸೇರಿದಂತೆ ಕೃಷಿಕ ಸಮಾಜದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.