ಉಬ್ಬಲಗಂಡಿ. ಸ.ಹಿ.ಪ್ರಾ ಶಾಲೆಯ ಶಿಥಿಲ ಕೊಠಡಿಗಳಲ್ಲಿ ಭಯದಲ್ಲಿ ಪಾಠ
ಸಂಜೆವಾಣಿ ವಾರ್ತೆ
ಸಂಡೂರು: ಜೂ; 30:  ಸಂಡೂರು ತಾಲುಕಿನ ತೋರಣಗಲ್ಲು ಹೋಬಳಿಯ ಉಬ್ಬಲಗಂಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ಹಲವು ವರ್ಷಗಳಿಂದ ಶಿಥಿಲಗೊಂಡಿದ್ದು ಇನ್ನುಳಿದವುಗಳು ಬಿರುಕು ಬಿಟ್ಟಿದ್ದು ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಭಯದಿಂದ ದಿನಗಳನ್ನು ದೂಡುತ್ತಿದ್ದಾರೆ. ಗ್ರಮದ ರಸ್ತೆಯ ಪಕ್ಕದಲ್ಲಿ ಚಿಕ್ಕದಾದ ಶಾಲೆ ನಿರ್ಮಾಣವಾಗಿದ್ದು ಒಟ್ಟು ಎಂಟು ಬೋಧನಾ ಕೊಠಡಿಗಳಿದ್ದು ಅವುಗಳಲ್ಲಿ ನಾಲ್ಕು ಸಮಪೂರ್ಣ ಶಿಥಿಲಗೊಂಡಿದ್ದರಿಂದ ಬೀಗ ಜಡಿಯಲಾಗಿದೆ. ಶಾಲೆಯ ಗ್ರಂಥಾಲಯ ಕೊಠಡಿ ಸಹಿತ ಇನ್ನುಳಿದ ಮೂರು ಕೊಠಡಿಗಳಲ್ಲಿ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಚಾವಣಿಯ ಕಾಂಕ್ರಿಟ್ ಕಿತ್ತು ಕಬ್ಬಿಣದ ಸರಳುಗಳು ಹೊರ ಚಾಚಿವೆ. ಈ ಕೊಠಡಿಗಳು ಮಳೆಗಾದಲ್ಲಿ ನಿರಂತರವಾಗಿ ಸೋರುತ್ತಿವೆ. ಶಾಲೆಯ ಮುಖ್ಯ ಶಿಕ್ಷಕರ ಕೊಠಡಿ ಬಿಟ್ಟು ಉಳಿದೆಲ್ಲಾ ಕೊಠಡಿಗಳು ಹಲವಾರು ವರ್ಷಗಳಿಂದ ಪಾಳುಬಿದ್ದು ಅವನತಿಯ ಹಂಚಿಗೆ ತಲುಪಿದ್ದು ಯಾವ ಕ್ಷಣದಲ್ಲಾದರೂ ಬೀಳಬಹುದು ಎನ್ನುವ ಅತಂಕ ಶಿಕ್ಷಕರ, ವಿದ್ಯಾರ್ಥಿಗಳದ್ದಾಗಿದ್ದು ಎನ್ನುವ ಅಭಿಪ್ರಾಯ ಮೂಡಿಬಂದಿದೆ.
1 ರಿಂದ 8ನೇ ತರಗತಿವರೆಗಿನ 111 ಮಕ್ಕಳು ಆಭ್ಯಾಸ ಮಾಡುತ್ತಿದ್ದಾರೆ. ಸೂಕ್ತ ಆಟದ ಮೈದಾನದ ವ್ಯವಸ್ಥೆ ಇಲ್ಲವಾಗಿದೆ. ವಿದ್ಯಾರ್ಥಿಗಳು ಪ್ರತಿವರ್ಷ ಕ್ರೀಡಾ ಅಭ್ಯಾಸದ ಚಟುವಟಿಕೆಗಳಿಗಾಗಿ ಪರದಾಡುವಂತಾಗ ಬೇಕಾಗಿದೆ. ಶಿಥಿಲಗೊಂಡ ಶಾಲಾ ಕಟ್ಟಡಗಳುನ್ನು ಶೀಘ್ರವಾಗಿ ತೆರವುಗೊಳಿಸಿ ಬೇರೆ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಸಂಡೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎನ್ನವುದು ಗ್ರಾಮಸ್ಥರ ಅಸಮಧಾನವಾಗಿದೆ. ಶೌಚಾಲಯದ ಸೌಲಭ್ಯವೂ ಇಲ್ಲದಿರುವುದರಿಂದ ಶೌಚಾಲಯಕ್ಕಾಗಿ ದೂರದ ಸಾರ್ವಜನಿಕg ಶೌಚಾಲಯಕ್ಕೆ ತೆರಳಬೇಕಾಗಿದೆ ರಸ್ತೆಯ ಪಕ್ಕದಲ್ಲಿ ನಿತ್ಯ ಸಂಚರಿಸುವ ನೂರಾರು ಅದಿರು ಲಾರಿಗಳು ಮಕ್ಕಳು ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿ ಜೀವಕ್ಕೆ ಮಾರಕವಾಗಿವೆ. ಅಧಿಕಾರಿಗಳು ಜನಪ್ರತಿನಿಧಿಗಳು, ಸಂಸದರೂ ಸೂಕ್ತ ಕ್ರಮವಹಿಸಿ ಮೂಲಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ ಶಾಲೆ ನಿರ್ಮಿಸಬೇಕು ಎಂದು ಗ್ರಾಮದ ಯುವಕ ಪಂಪಾಪತಿ ಒತ್ತಾಯಿಸಿದರು.
ಪ್ರತಿಕ್ರಿಯೆ: ಶಾಲೆಯ ಕೊಠಡಿಗಳು ಶಿಥಿಲಗೊಂಡಿದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ನೂತನ ಕಟ್ಟಡಕ್ಕೆ ನಿರ್ಮಾಣಕ್ಕೆ ಅನುದಾನವಿದ್ದು ಗ್ರಾಮದಲ್ಲಿ ಸ್ಥಳ ಅಭಾವದಿಂದ ಶಾಲೆಯನ್ನು ನಿರ್ಮಿಸಲು ಅಗುತ್ತಿಲ್ಲ ಸಾರ್ವಜನಿಕರು ಶಾಲೆಗೆ ಸ್ಥಳ ಒದಗಿಸಿದರೆ ತ್ವರಿತವಾಗಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಸಂಡೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿಯವರು ಪ್ರತಿಕ್ರಿಯಿಸಿದರು.