ಕೆಲವೇ ದಿನಗಳಲ್ಲಿ ಡಿಕೆಶಿ ಮುಖ್ಯಮಂತ್ರಿ
ಕೊಟ್ಟೂರು, ಜೂ.30:  ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದು ಪಕ್ಷದ ವಾಡಿಕೆ, ಆದರೆ  ಕೆಲವೊಂದು ರಾಜಕೀಯ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಇದಕ್ಕೆ ನನ್ನ ವಿರೋಧವಿಲ್ಲ. ಕೊಟ್ಟೂರೇಶ್ವರ ಸ್ವಾಮಿಯ ಆಶೀರ್ವಾದವಿದ್ದರೆ, ಮುಂದಿನ ದಿನಗಳಲ್ಲಿ ಅಥವಾ  ಕೆಲವೇ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬಹುದು ಎಂದು  ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ತಿಳಿಸಿದರು.
ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರು ಕೊಟ್ಟೂರೇಶ್ವರನ ದರ್ಶನ ಪಡೆದು, ಅವರ ತೂಕದ ಬೆಲ್ಲ ನೀಡಿ ಮಾತನಾಡಿದರು.
ಈಗಾಗಲೇ ಡಿಸಿಎಂ ಹುದ್ದೆ ಇದೆ, ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ನಂತರ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದು ಸೂಕ್ತ ಎಂಬುವುದು ನನ್ನ ಅಭಿಪ್ರಾಯ ಎಂದರು.
ಸಚಿವ ರಾಜಣ್ಣ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಲೋಕಸಭೆ ಚುನಾವಣೆ 9 ಸ್ಥಾನಗಳನ್ನು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಗೆಲುವು ಸಾಧಿಸಿದೆ. ಅದೇ ಶೂನ್ಯ ಗೆಲುವು ಸಾಧಿಸಿದ್ದರೆ ಅಧ್ಯಕ್ಷ ಸ್ಥಾನವನ್ನು ಕೇಳುತ್ತಿದ್ರಾ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾಧ್ಯಮದ ಮೂಲಕ ಯಾರು ಹೇಳಿಕೆಯನ್ನು ನೀಡಬಾರದು ಎಂದು ಆದೇಶ ಮಾಡಿದ್ದರೂ ಸಹ ಹಿರಿಯರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆದಿದ್ದೇವೆ ಎಂಬುವುದು ಅರಿವಿರಬೇಕು ಎಂದರು.
ಭಕ್ತರ ಅಭಿಮಾನದಿಂದಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಸ್ವಾಮಿಗಳು ಹೇಳಿಕೆ ನೀಡಿದ್ದಾರೆಯೇ ಹೊರತು ಯಾವುದೇ ಉದ್ದೇಶಪೂರ್ವಕವಾಗಿ ಅಲ್ಲ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಹಾಲೇಶ, ಮಂಜುನಾಥ, ರಾಜು ಬಿ ಎನ್, ರಾಜು ಅಕ್ಕಿ ಇನ್ನು ಮುಂತಾದವರು ಕೊಟ್ಟೂರೇಶ್ವರ ಸ್ವಾಮಿಯ ಆಶೀರ್ವಾದ ಪಡೆದುಕೊಂಡರು.
ಇದೇ ಧರ್ಮಕರ್ತರು ಶಾಸಕ ಬಸವರಾಜ ಶಿವಗಂಗಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.