ದೊಡ್ಡಎಣ್ಣೇಗೆರೆ ಗ್ರಾ.ಪಂ.ನಲ್ಲಿ ೧೦ ಗ್ರಾಮಗಳ ನೀರಿನ ಮಾದರಿ ಸಂಗ್ರಹ
ಹುಳಿಯಾರು, ಜೂ. ೩೦- ಜಿಲ್ಲಾ ಪಂಚಾಯ್ತಿಯಿಂದ ಜನರು ಕುಡಿಯಲು ಬಳಸುವ ನೀರಿನ ಮಾದರಿಗಳನ್ನು ಪರೀಕ್ಷಿಸಲು ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯಿಂದ ಸುಮಾರು ೧೦ ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆಂದು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ.
ಮುಂಗಾರು ಮಳೆ ಪ್ರಾರಂಭವಾಗಿದೆ. ಮಳೆಯ ನೀರು, ಕಲುಷಿತ ನೀರಿನ ಜತೆ ಸೇರಿ ನೀರಿನ ಮೂಲಗಳಿಗೆ ಹೋಗುವ ಸಾಧ್ಯತೆ ಹೆಚ್ಚು. ಹಾಗಾಗಿ ಗ್ರಾಮೀಣ ಜನ ವಸತಿ ಪ್ರದೇಶಗಳ ಕುಡಿಯುವ ನೀರಿನ ಮೂಲಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಿಗೆ ಸರಬರಾಜು ಆಗುವ ನೀರು, ಜಲಸಂಗ್ರಹಗಾರಗಳ ನೀರಿನ ಮಾದರಿ ಈ ಅಭಿಯಾನದ ಮೂಲಕ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯ್ತಿ ನೀರುಗಂಟಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವ ತರಬೇತಿಯನ್ನೂ ಸಹ ನೀಡಲಾಯಿತು. ಆರೋಗ್ಯಕ್ಕೆ ಮಾರಕ ಆರ್ಸೆನಿಕ್, ಪ್ಲೂರೈಡ್ ಮತ್ತು ನೀರಿನ ಗಡುಸುತನ ಇತ್ಯಾದಿಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಿ ಗುಣಮಟ್ಟದ ಬಗ್ಗೆ ಖಚಿತ ಪಡಿಸಿಕೊಂಡು ನೀರು ಪೂರೈಸುವಂತೆ ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ಪುಣ್ಯಕೋಟಿ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಂಸ್ಥೆಯ ಸಮುದಾಯ ಸಂಘಟಕರಾದ ದೇವರಾಜು, ಭರತ್‌ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬೀರಪ್ಪ, ಅಧ್ಯಕ್ಷೆ ತಾಯಮ್ಮ, ಸದಸ್ಯರುಗಳಾದ ಪ್ರಶಾಂತ್, ಕಲ್ಪನಾ ಮತ್ತಿತರರು ಉಪಸ್ಥಿತರಿದ್ದರು.