ಜಾನಪದ ಸಾಹಿತ್ಯದ ನಾಡಿಮಿಡಿತ ಮೊಗಳ್ಳಿ ಗಣೇಶ್
ಸಂಜೆವಾಣಿ ವಾರ್ತೆ
ಹೊಸಪೇಟೆ:, ಜೂ.30: ಕನ್ನಡ ಕಥಾ ಪರಂಪರೆಗೆ ಹೊಸತನ ನೀಡಿ, ಜಾನಪದ ಸಾಹಿತ್ಯ, ಕೃತಿ ಬರವಣಿಗೆ, ಸಂಶೋಧನೆ, ವಿಮರ್ಶೆ, ಮುಂತಾದ ಬರವಣಿಗೆಯ ಮೂಲಕ ಕನ್ನಡ ವಿಶ್ವವಿದ್ಯಾಲಯಕ್ಕೆ ಅಪಾರ ಹೆಸರು ತಂದುಕೊಟ್ಟ ಕೀರ್ತಿ ಡಾ. ಮೊಗಳ್ಳಿ ಗಣೇಶ್ ಸಲ್ಲುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ನುಡಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ ಡಾ.ಮೊಗಳ್ಳಿ ಗಣೇಶ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಪದ ಸಾಹಿತ್ಯದ ಮೂಲಕ ಮಂಟೇಸ್ವಾಮಿ ಹಾಗೂ ಮಲೆಮಹದೇಶ್ವರ ಸ್ವಾಮಿಯ ಕುರಿತು ಅನೇಕ ಲೇಖನಗಳಿಂದ ನಾಡಿಗೆ ಪರಿಚಯವಾದವರು. ಇವರ ಕೃತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಪ್ರಮುಖ ಭಾಷೆಗಳಿಗೆ ಭಾಷಾಂತರವಾಗಿರುವುದು ಕನ್ನಡ ವಿಶ್ವವಿದ್ಯಾಲಯದ ಹೆಮ್ಮೆಯಾಗಿದೆ. ಇವರು ಸಾಹಿತ್ಯ ಲೋಕದಲ್ಲಿ ಕಟು ವಿಮರ್ಶೆಗೆ ಹೆಸರಾಂತರು. ಇಂದು ಇವರು ವೃತ್ತಿಯಿಂದ ನಿವೃತ್ತರಾಗುತ್ತಿರುವುದು ನಮಗೆಲ್ಲ ಬೇಸರದ ಸಂಗತಿಯಾಗಿದೆ ಇವರ ಮುಂದಿನ ನಿವೃತ್ತಿ ಜೀವನ ಆರೋಗ್ಯವಾಗಿರಲೆಂದು ಆಶಿಸುವೆ ಎಂದು ನುಡಿದರು.
ಉಪಕುಲಸಚಿವ ಡಾ.ಎ. ವೆಂಕಟೇಶ್ ಮಾತನಾಡಿ, ಡಾ. ಮೊಗಳ್ಳಿ ಗಣೇಶ್ ಅವರು ಕಾರ್ಯಕ್ರಮಗಳಿಂದ ದೂರ ಉಳಿದವರು. ದಲಿತ ಸಮೂಹಕ್ಕೆ ಇವರ ಬರವಣಿಗೆಗಳು ಪ್ರೇರಕ ಶಕ್ತಿಯಾಗಿ ನಿಂತಿವೆ. ಇವರು ವೃತ್ತಿಯಿಂದ ನಿವೃತ್ತರಾದರು ಪ್ರವೃತ್ತಿಯಿಂದ ಸಾಹಿತಿಗಳೇ ಇವರ ನಿವೃತ್ತಿಯ ನಂತರ ಇವರ ಸ್ಥಾನವು ನಿರ್ವಾತಭಾವವನ್ನು ಸೂಚಿಸುತ್ತಿದೆ ಇವರ ಮುಂದಿನ ಜೀವನವೂ ಸುಖಕರವಾಗಿ, ಆರೋಗ್ಯಕರವಾಗಿ ಇರಲೆಂದು ಆಶಿಸುವೆ ಎಂದರು.
ಡಾ. ಮೊಗಳ್ಳಿ ಗಣೇಶ್ ಮಾತನಾಡಿ, ಡಾ. ಚಂದ್ರಶೇಖರ ಕಂಬಾರರು ನನ್ನನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಬರಮಾಡಿಕೊಂಡವರು, ಅವರಿಗೆ ನಾನು ಚಿರರುಣಿಯಾಗಿರುವೆ. ಕಂಬಾರರು ನನಗೆ ವರ್ಷಕ್ಕೆ ಎರಡು ಕೃತಿಗಳನ್ನು ರಚಿಸಬೇಕೆಂದು ಆದೇಶಿಸಿದ್ದರು. ಆ ಕಾರ್ಯವನ್ನು ಸ್ವಲ್ಪ ಮಟ್ಟಿಗೆ ಮಾಡುವ ಪ್ರಯತ್ನವನ್ನು ಮಾಡಿರುವೆ. ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಾಹಿತ್ಯ ಸಂಶೋಧನೆ ಲೋಕದಲ್ಲಿ ಮಾಡಿದ ಸಾಧನೆ ವಿಶ್ವದ ಪ್ರಮುಖ ಭಾಷೆಗಳಿಗೆ ಭಾಷಾಂತರಿಸಿದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶ್ವದ ಯಾವುದೇ ವಿಶ್ವವಿದ್ಯಾಲಯವು ಸರಿಸಾಟಿಯಿಲ್ಲ. ಕನ್ನಡ ವಿಶ್ವವಿದ್ಯಾಲಯ ನನಗೆ ತುಂಬಾ ಕೊಟ್ಟಿದೆ ಇಲ್ಲಿನ ವಿದ್ಯಾರ್ಥಿಗಳು ನನ್ನ ಕುಟುಂಬದ ಸದಸ್ಯರೇ ಎಂದು ಭಾವಿಸಿರುವೆ. ಹಾಗೆಯೇ ಸಹೋದ್ಯೋಗಿಗಳು ಸಿಬ್ಬಂದಿಗಳು ಪ್ರೀತಿಯಿಂದ ನಡೆದುಕೊಂಡಿದ್ದಾರೆ ಎಂದರು.
ಸಮಾರಂಭದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಆಡಳಿತ ಸಿಬ್ಬಂದಿಗಳು ಹಾಗೂ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.