ವೀರಶೈವ ಕಾಲೇಜ್ ನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.30: ನಗರದ ವೀರಶೈವ ಮಹಾವಿದ್ಯಾಲಯ, ಬಳ್ಳಾರಿ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು , ಬಳ್ಳಾರಿ ಜಿಲ್ಲಾ ಘಟಕ ಇವರ ಸಹಯೋಗದೊಂದಿಗೆ ದಿ.ಕೆ.ವಿ.ತಿರುಪಾಲಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿಂದಿನ ದಿನಮಾನಗಳಿಗೆ ಹೊಲಿಸಿದರೆ ಇಂದು ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಅದಕ್ಕೆ ನಾವೆಲ್ಲರೂ ಒಂದಲ್ಲ ಒಂದು ರೀತಿ ಹೊಣೆಗಾರರಾಗುತ್ತೇವೆ.  ಸಮಾಜದಲ್ಲಿ ಮೌಲ್ಯಗಳು ಕುಸಿದಷ್ಟು ಅದು ತನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇದು ಆಶಾದಾಯಕ ಸಂಗತಿ ಅಲ್ಲ. ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸುವುದಕ್ಕಿಂತ ಮುಖ್ಯವಾಗಿ ಸಾಮಾಜಿಕ ಮೌಲ್ಯಗಳನ್ನು  ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಅಮರೇಶ್ವರ ಪೂಜಾರಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಕವಿರಾಜ ಮಾರ್ಗದ ಮಹತ್ವ ಮತ್ತು ಮೌಲಿಕತೆ” ವಿಷಯ ಕುರಿತು ಡಾ.ಕೆ.ಎಸ್.ಶಿವಪ್ರಕಾಶ್ , ಸಹಾಯಕ ಪ್ರಾಧ್ಯಾಪಕರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಉಪನ್ಯಾಸ ನೀಡಿದರು.
ಕೃತಿಯ ಮೌಲಿಕ ವಿಚಾರದಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಲ್ಲುಕಂಬ ಪಂಪಾಪತಿ, ಅಧ್ಯಕ್ಷರು , ಸ್ನೇಹ ಸಂಪುಟ, ಹೆಚ್.ಆರ್.ಶಿವಶಂಕರ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು ನುಡಿ ಸಂಸ್ಕೃತಿ ಕಟ್ಟಿ ಬೆಳೆಸುವಲ್ಲಿ ಮೊದಲುನಿಂದಲೂ ಮಹತ್ತರವಾದ ಕೆಲಸ ಮಾಡುತ್ತ ಬಂದಿದೆ. ಅದನ್ನು ಇಂದಿನ ಯುವ ಪೀಳಿಗೆ ಕಳಕಳಿಯಿಂದ ಮುಂದುವರಿಸಬೇಕಿದೆ. ಕ.ಸ.ಪ.ದ ಕಾರ್ಯಕ್ರಮಗಳು ಪ್ರಧಾನ ಪಾತ್ರ ವಹಿಸುತ್ತದೆ. ಬೇರೆ ಬೇರೆ ಉಪನ್ಯಾಸ ಇತರೆ ಕಾರ್ಯಕ್ರಮಗಳ  ಮೂಲಕ ಇಂದಿನ ಯುವ ಪೀಳಿಗೆಗೆ ಕನ್ನಡ ನಾಡು ನುಡಿಯನ್ನು ಶ್ರೀಮಂತ ಗೊಳಿಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ವಿದ್ಯಾರ್ಥಿದಸೆಯಿಂದಲೆ ನಾಡು ನುಡಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸಲು ಉತ್ಸಹಿಗಳಾಗಬೇಕು, ಬಳ್ಳಾರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ ಅವರ ಬಳಗ ನಿರಂತರ ಕಾರ್ಯಕ್ರಮಗಳೊಂದಿಗೆ ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ ಎಂದು ದರೂರು ಶಾಂತನಗೌಡ ಅಧ್ಯಕ್ಷರು ವೀರಶೈವ ಮಹಾವಿದ್ಯಾಲಯ , ಬಳ್ಳಾರಿ ತಮ್ಮ ಅಧ್ಯಕ್ಷತೆ ನುಡಿಗಳಲ್ಲಿ ತಿಳಿಸಿದರು.
ಬೆಣಕಲ್ಲು ಬಸವರಾಜಗೌಡ , ಮಾಜಿ ಮಹಾಪೌರರು, ಮಹಾನಗರ ಪಾಲಿಕೆ, ಬಳ್ಳಾರಿ. ಡಾ.ಜಿ.ಮನೋಹರ, ಪ್ರಾಚಾರ್ಯರು , ವೀರಶೈವ ಮಹಾವಿದ್ಯಾಲಯ, ಬಳ್ಳಾರಿ ಬೋಧಕ , ಬೋಧಕೇತರ ಸಿಬ್ಬಂಧಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಭ್ರಮರಾಂಬ ಸ್ವಾಗತಿಸಿದರು. ಕು.ಮಹಾಲಿಂಗಮ್ಮ ವಂದಿಸಿದರು. ಡಾ.ಕೆ.ನೀಲಮ್ಮ, ಡಾ.ಜಿ.ಶ್ಯಾಮೂರ್ತಿ ಕಾರ್ಯಕ್ರಮ ನಿರೂಪಿಸಿದರು.