ತಾಲ್ಲೂಕಿನ ದೈಹಿಕ ಶಿಕ್ಷಕರಿಗೆ ಬೀಳ್ಕೊಡುಗೆ
ಕೋಲಾರ,ಜೂ,೩೦- ಪ್ರಸಕ್ತ ಸಾಲಿನ ಕ್ರೀಡಾಕೂಟಗಳ ಆಯೋಜನೆಯೊಂದಿಗೆ ದೈಹಿಕ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳು ಆಟೋಟಗಳಲ್ಲಿ ಆಸಕ್ತಿಯಿಂದ ಭಾಗವಹಿಸುವಂತೆ ಮಾಡುವಲ್ಲಿ ಬದ್ದತೆಯಿಂದ ಕೆಲಸ ಮಾಡಿ ಎಂದು ಬಿಇಒ ಕನ್ನಯ್ಯ ಕರೆ ನೀಡಿದರು.
ನಗರದ ಬಾಲಕಿಯರ ಪದವಿ ಪೂರ್ವಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಶಾಖೆ ವತಿಯಿಂದ ನಡೆದ ತಾಲ್ಲೂಕಿನ ಸಮಸ್ತ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ೨೦೨೪-೨೫ ನೇ ಸಾಲಿನ ಕ್ರೀಡಾಕೂಟಗಳ ಸಂಘಟನೆ, ದೈಹಿಕ ಶಿಕ್ಷಣ ವಿಭಾಗದ ದಾಖಲೆಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಸಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದೈಹಿಕ ಶಿಕ್ಷಣ ಇಂದು ಅತಿ ಮುಖ್ಯವಾಗಿದೆ, ಮಕ್ಕಳಲ್ಲಿ ಪಠ್ಯದಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುವಲ್ಲಿ ಅವರಲ್ಲಿ ಉತ್ತಮ ಆರೋಗ್ಯ ಮೂಡಿಸುವ ಕೆಲಸ ನಿಮ್ಮಿಂದ ಸಾಧ್ಯವಾಗಿದೆ, ಶಾಲೆಗಳಲ್ಲಿ ಸ್ವಚ್ಚತೆ,ಶಿಸ್ತು ಕಾಪಾಡುವಲ್ಲಿಯೂನಿಮ್ಮ ಪಾತ್ರ ಮಹತ್ವದ್ದು ಎಂದರು.
ತಾಲ್ಲೂಕು ಟಿಪಿಒ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ದೈಹಿಕ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನಹರಿಸೋಣ, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಶಾಲೆಗಳಲ್ಲಿ ಶಿಸ್ತು ಮೂಡಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಇಂದು ಪಠ್ಯದಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಲಾಗಿದೆ, ಕ್ರೀಡೆ ಸಮಗ್ರ ಶಿಕ್ಷಣದ ಭಾಗವಾಗಿದೆ ಎಂದರು.
ದೈಹಿಕ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಂಬಿಕಾ, ಉಪಾಧ್ಯಕ್ಷ ಕೆ.ವೆಂಕಟೇಶ್, ಡಾ.ಶ್ರೀನಿವಾಸ್, ಸೊಣ್ಣೇಗೌಡ, ವರದರಾಜಯ್ಯ, ಎಂ ಕೆ ವೆಂಕಟೇಶ್, ಶಶಿಕಲಾ, ಸಂಗಮ್ಮ ಮುಂತಾದವರು ಹಾಜರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ವಯೋ ನಿವೃತ್ತಿಯಾದ ಭಟ್ರಹಳ್ಳಿಯ ಗೋಕುಲ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ವಿ ವರದರಾಜಯ್ಯ, ಚಿನ್ಮಯ ವಿದ್ಯಾಲಯದ ಲೋಕೇಶ್, ಸಿದ್ದಾರ್ಥ ಪ್ರೌಢಶಾಲೆಯ ಮಂಜುಳಾ< ಜವಾಹರ್ ವಿದ್ಯಾಲಯದ ಯೂನುಸ್ ಖಾನ್‌ರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹಾಗೂ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಹಿಂದಿನ ಖಜಾಂಚಿ ವರದರಾಜಯ್ಯ ರವರ ವಯೋ ನಿವೃತ್ತಿ ಯಿಂದ ತೆರವುಗೊಂಡಿದ್ದ ತಾಲ್ಲೂಕು ಖಜಾಂಚಿ ಸ್ಥಾನಕ್ಕೆ ರಮಣ ಮಹರ್ಷಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಮುರಳೀಧರ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.