ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡೋಣ-ಮಂಗಳಾ
ಕೋಲಾರ,ಜೂ,೩೦- ನೂತನ ಅಪರ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಎಂ.ಮಂಗಳಾ ಹಾಗೂ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಮೈತ್ರಿ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಡಿಸಿ ಮಂಗಳಾ, ಕೋಲಾರಕ್ಕೆ ನಾನು ಹೊಸಬಳಲ್ಲ, ಇಲ್ಲಿನ ಸಮಸ್ಯೆಗಳ ಅರಿವು ನನಗಿದೆ, ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಸರ್ಕಾರಿ ನೌಕರರು ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರು ಕಾರ್ಯಾಂಗದ ಪ್ರಮುಖ ಭಾಗವಾಗಿದ್ದು, ನೀವು ಉತ್ತಮ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಜಿಲ್ಲೆಯ ಅಭಿವೃದ್ದಿ, ಜನಪರ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳಿಸಲು ತಮ್ಮ ಮಾರ್ಗದರ್ಶನದಂತೆ ಬದ್ದತೆಯಿಂದ ಕರ್ತವ್ಯ ನಿರ್ವಹಿಸಲು ಜಿಲ್ಲೆಯ ನೌಕರರು ಸಿದ್ದರಿದ್ದು, ತಮಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದಿಂದ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಮೈತ್ರಿ ಹೆಚ್.ಪಿಎಸ್.ಅವರನ್ನು ಸ್ವಾಗತಿಸಲಾಯಿತು.
ನೌಕರರ ಸಂಘದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಎಸಿ ಡಾ.ಮೈತ್ರಿ, ಕಂದಾಯ ಇಲಾಖೆ ಜನತೆಗೆ ಅತಿ ಹತ್ತಿರವಾಗಿರುವ ಇಲಾಖೆಯಾಗಿದೆ, ಅದರಲ್ಲೂ ಜಮೀನಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇವೆ, ಬರ ಪರಿಹಾರ ಸೇರಿದಂತೆ ಎಲ್ಲಾ ವಿಪತ್ತು ನಿರ್ವಹಣೆ ಮತ್ತಿತರ ಕಾರ್ಯಗಳು ಈ ಇಲಾಖೆಯ ಅಧೀನದಲ್ಲೇ ಇದ್ದು, ಇಲ್ಲಿ ಕೆಲಸ ಮಾಡುವ ನೌಕರರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಹಾಗೂ ರೈತರು,ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ತಮ್ಮ ಪ್ರಯತ್ನಕ್ಕೆ ನೌಕರರ ಸಂಘ ಸಹಕಾರ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಕೆಜಿಎಫ್ ತಾಲ್ಲೂಕುಅಧ್ಯಕ್ಷ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಅಂಕಿಅಂಶಗಳ ಇಲಾಖೆಯ ರವಿ, ಬಂಗಾರಪೇಟೆ ತಹಸೀಲ್ದಾರ್ ರಶ್ಮಿ, ಸರ್ವೇ ಇಲಾಖೆಯ ರವಿ, ಮಲ್ಲೇಶ್, ಸುಭಾಷ್, ಕೆಜಿಎಫ್‌ನ ಉಮೇಶ್ ಮತ್ತಿತರರಿದ್ದರು.