ಗ್ರಾಮೀಣರಲ್ಲಿ ಆರೋಗ್ಯ ಜಾಗೃತಿ ಮೂಡಿಸಿ-ಗೋಪಾಲಪ್ಪ
ಕೋಲಾರ,ಜೂ,೩೦- ಭಾವಿ ಶಿಕ್ಷಕರಾದ ಬಿಇಡಿ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿರಬೇಕು, ಸಮಾಜದಲ್ಲಿ ಸ್ವಚ್ಚತೆ, ಸಮುದಾಯದಲ್ಲಿ ಆರೋಗ್ಯದ ಅರಿವು ನೀಡುವುದು, ಗಿಡ ನೆಟ್ಟು ಪರಿಸರ ಸಂರಕ್ಷಿಸುವ ಪ್ರಮುಖ ಜವಾಬ್ದಾರಿಗಳನ್ನು ಜೀವನದಲ್ಲಿ ನಿರ್ವಹಿಸಬೇಕು ಎಂದು ನಗರದ ರವಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಇ.ಗೋಪಾಲಪ್ಪ ಕರೆ ನೀಡಿದರು.
ನಗರದ ರವಿ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಬಿಎಡ್ ನಾಲ್ಕನೆ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಸಮುದಾಯ ಆಧಾರಿತ ಚಟುವಟಿಕೆಗಳ ಆಯೋಜನಾ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಇಡಿ ವಿದ್ಯಾರ್ಥಿಗಳು ಗ್ರಾಮೀಣ ಜನರೊಂದಿಗೆ ಬೆರೆಯಬೇಕು, ಈ ಸಮುದಾಯದಲ್ಲಿ ಆರೋಗ್ಯ ಕುರಿತ ಜಾಗೃತಿ ಮೂಡಿಸುವುದು, ಸ್ವಚ್ಛ ಭಾರತ ಕಾರ್ಯಕ್ರಮದಡಿ ಸ್ವಚ್ಛತೆಯ ಮಹತ್ವವನ್ನು ತಿಳಿಸಿಕೊಡುವುದು ಮತ್ತು ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವುದು ಮತ್ತು ಔಷಧಿ ಸಸ್ಯಗಳ ವಿತರಿಸಿ ಅದನ್ನು ಬೆಳೆಸಲು ಪ್ರೇರಣೆ ನೀಡಿ ಎಂದರು.
ವಿದ್ಯಾರ್ಥಿಗಳಲ್ಲಿ ಸಮಯ, ಕರ್ತವಪ್ರಜ್ಞೆ ಮೂಡಿಸುವುದು, ಶಾಂತಿ ಯುತ, ಆರೋಗ್ಯಕರ ಜೀವನ ನಡೆಸಲು ಪ್ರೇರಣೆ, ನಾಯಕತ್ವ, ಪರಸ್ಪರ ತಿಳುವಳಿಕೆ,ನಾಗರೀಕ ಪ್ರಜ್ಞೆ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಇಂದು ಅಗತ್ಯವಾಗಿರುವ ಸಾಮಾಜಿಕ, ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ,ಮಾನಸಿಕ, ಭಾವನಾತ್ಮಕ ಮೌಲ್ಯಗಳನ್ನು ಬೆಳೆಸುವ ಮೂಲಕ ಗ್ರಾಮೀಣ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಉದ್ದೇಶವೂ ಈ ಶಿಬಿರದ್ದಾಗಿದೆ, ಉತ್ತಮ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ನಿಮ್ಮಮೂಲಕ ಸಮುದಾಯಕ್ಕೆ ತಲುಪಿಸುವ ಪ್ರಯತ್ನ ಇದಾಗಿದೆ ಎಂದು ವಿವರಿಸಿದರು.
ರವಿಶಿಕ್ಷಣ ಸಂಸ್ಥೆಯ ನಿರ್ದೇಶಕ ನರೇಶ್‌ಬಾಬು ಮಾತನಾಡಿ, ಶಿಕ್ಷಕರಾಗುವ ನಿಮಗೆಹೆಚ್ಚಿನ ಹೊಣೆಗಾರಿಕೆ ಇದೆ, ನೀವು ಮಕ್ಕಳಲ್ಲಿ ತಂದೆ,ತಾಯಿ,ಗುರುಹಿರಿಯರೆಂಬ ಗೌರವ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿ, ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಸಮುದಾಯದ ಸಮಸ್ಯೆ ಅರಿತು ಅವರಿಗೆ ನೇರವಾಗಿ, ಸ್ವಚ್ಛತೆ, ಆರೋಗ್ಯ, ಶಿಕ್ಷಣದ ಮಹತ್ವ, ಪರಿಸರ ಮಾಲಿನ್ಯದಿಂದಾಗುವ ಸಂಕಷ್ಟಗಳ ಕುರಿತು ತಿಳಿಸಿಕೊಡಿ ಎಂದರು. ನರಸಾಪುರಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಮಾತನಾಡಿ, ಗ್ರಾಮೀಣ ಜನತೆಗೆ ಆರೋಗ್ಯ ರಕ್ಷಣೆಗೆ ಸಲಹೆ ನೀಡಿ, ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವಂತೆ ಪ್ರೇರೇಪಿಸಿ, ಇದೀಗ ಡೆಂಗ್ಯು ವೇಗವಾಗಿ ಹರಡುತ್ತಿದ್ದು, ಅದರಿಂದ ರಕ್ಷಣೆಗಾಗಿ ಸೊಳ್ಳೆಗಳ ನಿಯಂತ್ರಣ ಮಾಡುವಂತೆ ಸಲಹೆ ನೀಡಿದರು.
ಇಂಡಿಯನ್ ಆಯಿಲ್ ಸಂಸ್ಥೆಯ ಸುಬ್ರಹ್ಮಣ್ಯ, ಅಡುಗೆ ಅನಿಲ ಬಳಕೆ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು.