ಸೂಲೂರಿನಲ್ಲಿ ಎನ್ನೆಸ್ಸೆಸ್ ಶಿಬಿರ
ಕೋಲಾರ,ಜೂ,೩೦- ರಾಷ್ಟ್ರೀಯ ಸೇವಾ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಗ್ರಾಮೀಣ ಜನತೆಯ ಸಂಕಷ್ಟಗಳ ಅಧ್ಯಯನ ನಡೆಸಿ, ಕೃಷಿ,ಹೈನುಗಾರಿಕೆಯ ಕಷ್ಟನಷ್ಟಗಳ ಕುರಿತು ಅರಿತುಕೊಳ್ಳಿ, ಹಳ್ಳಿಗರಿಗೂ ಸ್ವಚ್ಚತೆ, ಆರೋಗ್ಯ ರಕ್ಷಣೆಯ ಮಹತ್ವವನ್ನು ತಿಳಿಸಿಕೊಡಿ ಎಂದು ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಕರೆ ನೀಡಿರು.
ತಾಲ್ಲೂಕಿನ ಸೂಲೂರು ಗ್ರಾಮದಲ್ಲಿ ಬೆಂಗಳೂರಿನ ಕಲ್ಯಾಣನಗರದ ಇಂಡೋ ಏಷಿಯನ್ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ, ಎನ್ನೆಸ್ಸೆಸ್‌ನ ಶ್ರಮವೇವ ಜಯತೇ ಧ್ಯೇಯ ವಾಕ್ಯ ಪಾಲಿಸಿ ಎಂದು ತಿಳಿಸಿದರು.
ಶಿಬಿರದ ಮುಖ್ಯ ಉದ್ದೇಶ ಶ್ರಮದಾನ ಗ್ರಾಮೀಣರಿಗೆ ಆರೋಗ್ಯದ ಅರಿವು ನೀಡುವುದು, ಸಮುದಾಯದ ಚಟುವಟಿಕೆಗಳಲ್ಲಿನೀವು ಪಾಲ್ಗೊಳ್ಳುವುದಾಗಿದೆ ಎಂದರು. ನಗರ ಪ್ರದೇಶದ ವಿದ್ಯಾರ್ಥಿಗಳಾದ ನೀವು ಗ್ರಾಮೀಣ ಜನರ ಸಮಸ್ಯೆಗಳ ಕುರಿತು ಅರಿತುಕೊಳ್ಳಿ, ಕೃಷಿ ಚಟುವಟಿಕೆಗಳ ಕಷ್ಟದ ಅರಿವು ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಇಂದು ಶಿಕ್ಷಣಕ್ಕಿಂತ ಸಂಸ್ಕಾರ ಅತಿ ಮುಖ್ಯವಾಗಿದೆ, ಯುವಕರು ದುಶ್ಚಟಗಳಿಂದ ದಾರಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ, ಈ ಹಿನ್ನಲೆಯಲ್ಲಿ ವಿದ್ಯೆಗಿಂತ ಮೊದಲು ಬದುಕು ಕಲಿಯಬೇಕು ಎಂದು ತಿಳಿಸಿ, ಎನ್ನೆಸ್ಸೆಸ್ ಶಿಭಿರದ ಮೂಲಕ ಗ್ರಾಮದಲ್ಲಿ ಸ್ವಚ್ಚತೆಗೆ ತಳಹದಿಹಾಕಿ, ನಿಮ್ಮ ಕೆಲಸವನ್ನು ಜನತೆ ಸ್ಮರಿಸುವಂತೆ ನೋಡಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಪ್ಪ, ವಿದ್ಯಾರ್ಥಿಗಳಲ್ಲಿ ಇಂದು ಶ್ರಮದ ಅರಿವು ಇಲ್ಲವಾಗಿದೆ,
ಪೋಷಕರು ಕೇಳಿದ್ದನ್ನು ತೆಗೆದುಕೊಡುತ್ತಾರೆ, ನಿಮ್ಮ ಆಸೆ ಪೂರೈಸುವ ಕೆಲಸವನ್ನು ಮಾಡುವುದರಿಂದ ನಿಮಗೆ ಕಷ್ಟದ ಕೆಲಸಗಳ ಅರಿವು ಇರುವುದಿಲ್ಲ ಎಂದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬಲಗೊಳಿಸಿ ರಾಷ್ಟ್ರೀಯಭಾವನೆ ಮೂಡಿಸುತ್ತದೆ, ಸಮುದಾಯದೊಂದಿಗೆ ಕೂಡಿ ಬದುಕುವ ಶಕ್ತಿ ನೀಡುತ್ತದೆ ಎಂದು ತಿಳಿಸಿ, ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಏಷಿಯನ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ರಮಾ ಮಾತನಾಡಿ, ಬೆಂಗಳೂರಿನಿಂದ ಇಲ್ಲಿಗೆ ಬಂದು ಎನ್ನೆಸ್ಸೆಸ್ ಶಿಬಿರವನ್ನು ಇಲ್ಲಿ ಆಯೋಜಿಸಿದ್ದೇವೆ, ಇದಕ್ಕೆ ಕಾರಣ ಇಲ್ಲಿನ ಗ್ರಾಮಸ್ಥರು,ಗ್ರಾಮ ಪಂಚಾಯಿತಿ ನೀಡುತ್ತಿರುವ ಸಹಕಾರ ಕಾರಣವಾಗಿದೆ ಎಂದರು.