ಬೆಲೆ ಏರಿಕೆ ವಾಪಸ್ಸಿಗೆ ವಿಪಕ್ಷ ನಾಯಕ ಅಶೋಕ್ ಆಗ್ರಹ
ಕೋಲಾರ,ಜೂ,೩೦- ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಕಸಿದು ಕೊಳ್ಳುವಂತ ಯೋಜನೆಗಳಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಒಂದು ವರ್ಷದೊಳಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ಸಂಕಷ್ಟಕ್ಕೆ ಒಳಪಡೆಸಿದೆ, ಕೊಡಲೇ ಏರಿಕೆ ಮಾಡಿರುವ ದರಗಳನ್ನು ಹಿಂಪಡೆಯ ಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಆಗ್ರಹಿಸಿದರು,
ನಗರದ ಜಿಲ್ಲಾಡಳಿತ ಕಚೇರಿಯ ಬಳಿ ಜಿಲ್ಲಾ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಕಾಂಗ್ರೇಸ್ ಸರ್ಕಾರದ ಬೆಲೆ ಏರಿಕೆ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ವಿದ್ಯುತ್ ಬೆಲೆ,ಡಿಸೇಲ್, ಪೆಟ್ರೋಲ್ ಬೆಲೆ, ಹಾಲಿನ ಬೆಲೆ, ಮದ್ಯದ ಬೆಲೆ, ಮುದ್ರಾಂಕ ನೊಂದಣಿ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನಕ್ಕೆ ಅವಶ್ಯಕವಾದ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆಯಾಗುವಂತ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ದೂರಿದರು,
ಹಾಲಿನ ದರವನ್ನು ವರ್ಷದೊಳಗೆ ೨ ಭಾರಿ ಏರಿಕೆ ಮಾಡಿದೆ. ಉಚಿತ ವಿದ್ಯುತ್ ನೀಡಿ, ವಿದ್ಯುತ್ ದರವನ್ನು ಹಲವಾರು ಬಾರಿ ಏರಿಕೆ ಮಾಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ ಡಿಸೇಲ್ ಪೆಟ್ರೋಲ್ ದರ ಏರಿಕೆ ಮಾಡಿದೆ. ೧೦ ಕೆ.ಜಿ. ಅಕ್ಕಿ ಉಚಿತ ಎಂದು ಹೇಳಿದೆ ಅದರೆ ಅದರಲ್ಲಿ ೫ ಕೆ.ಜಿ. ಕೇಂದ್ರ ಸರ್ಕಾರದ್ದಾಗಿದೆ. ಅದರಲ್ಲಿ ೨ ಕೆ.ಜಿ. ಹಿಡಿದು ರಾಗಿ, ಇತ್ಯಾದಿ ನೀಡುತ್ತಿದ್ದಾರೆ. ೫ ಕೆ.ಜಿ.ಅಕ್ಕಿ ಹಣ ಸಮರ್ಪವಾಗಿ ನೀಡುತ್ತಿಲ್ಲ. ಮದ್ಯದ ಬೆಲೆ ಕ್ವಾಟರ್‌ಗೆ ೫೦ ರೂ ಏರಿಕೆ ಮಾಡಿದ್ದಾರೆ. ಮನೆ ಯಾಜಮಾನಿ ಖಾತೆಗೆ ಪ್ರತಿ ಮಾಹೆ ೨ ಸಾವಿರ ರೂ ಜಮೆ ಮಾಡುವುದಾಗಿ ತಿಳಿಸಿ ಚುನಾವಣೆಯ ನಂತರ ಸಮರ್ಪಕವಾಗಿ ಜಮೆಯಾಗುತ್ತಿಲ್ಲ ಎಂದರು,
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಯೋಜನೆಗಳ ನೆಪದಲ್ಲಿ ಯಾವೂದೇ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಅಭಿವೃದ್ದಿ ಯೋಜನೆಗಳ ಹಣವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಹಾಗೂ ಇತರೆ ರಾಜ್ಯಗಳ ಚುನಾವಣೆಗೆ ದುರ್‍ಬಳಿಸಿ ಕೊಳ್ಳುತ್ತಿದೆ. ಸೋನಿಯ ಹಾಗೂ ರಾಹುಲ್‌ಗಾಂಧಿ ಖಾತೆಗಳಿಗೆ ಜಮೆ ಮಾಡುತ್ತಿದೆ. ಅಹಿಂದ ವರ್ಗಗಳ ಪರ ಎಂದು ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರವು ಎಸ್.ಸಿ.ಎಸ್.ಟಿ. ಮೀಸಲಾತಿ ಹಣವನ್ನು ದುರ್‍ಬಳಿಸಿ ಕೊಂಡು ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ಕಿಡಿ ಕಾರಿದರು,
ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಸಮ್ಮುಖದಲ್ಲಿ ಶ್ರೀ ಚಂದ್ರಶೇಖರ ಸ್ವಾಮಿಗಳು ಸಿದ್ದರಾಮಯ್ಯ ಅವರು ೨ ಭಾರಿ ಮುಖ್ಯ ಮಂತ್ರಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಉಪಮುಖ್ಯ ಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯ ಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವಂತೆ ತಮ್ಮ ಅಸಮಾಧನವನ್ನು ವ್ಯಕ್ತ ಪಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ನಾಚಿಕೆ ಮಾನ ಮಾರ್ಯದೆ ಏನಾದರೂ ಇದಲ್ಲಿ ಕೊಡಲೇ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೇ ನೀಡಿ ಹೊರ ಬರಲಿ ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ಸಿದ್ದರಾಮಯ್ಯನವರ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಶೇ ೪೦ ಕಮೀಷನ್ ಭ್ರಷ್ಟ ಸರ್ಕಾರವಾಗಿದೆ. ಎಸ್.ಸಿ.ಎಸ್.ಟಿ. ನಿಗಮದ ೧೮೭ ಕೋಟಿ, ಮೀಸಲಾತಿ ಹಣ ೧೩,೩೦೦ ಕೋಟಿ ರೂ ದುರ್‍ಬಳಿಕೆ ಮಾಡಿಕೊಂಡಿರುವ ಸರ್ಕಾರವು ದಲಿತರ ಪರ ,ಹಿಂದುಳಿದವರ ಪರ ಎಂದು ಹೇಳಿ ಕೊಳ್ಳುವಂತ ನೈತಿಕತೆಯನ್ನು ಕಳೆದು ಕೊಂಡಿದೆ. ದಿನ ನಿತ್ಯ ಬಳಕೆ ವಸ್ತುಗಳ ಬಲೆ ಏರಿಕೆಯನ್ನು ಕೊಡಲೇ ಹಿಂದಕ್ಕೆ ಪಡೆಯ ಬೇಕು ಅದುವರೆಗೂ ಬಿಜೆಪಿ ಹೋರಾಟ ಮುಂದು ವರೆಸುವುದು ಜೈಲಿಗೂ ಹೋಗಲು ಸಿದ್ದರಿದ್ದೇವೆ ಎಂದಯ ಘೋಷಿಸಿದರು,
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹೊಂದಾಣಿಕೆ ಮಾಡಲು ಅಭಿವೃದ್ದಿ ಹಣವನ್ನು ದುರ್‍ಬಳಿಸಿ ಕೊಂಡು ಅಗತ್ಯ ವಸ್ತುಗಳನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡುತ್ತಿದೆ ಎಂದು ಟೀಕಿಸಿದರು,
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಪ್ರಸ್ತಾವಿಕ ನುಡಿಗಳಾಡಿದರು,
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆಗಳು ಹಿಂಪಡೆಯಲು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು,
ಪ್ರತಿಭಟನೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೈ.ಸಂಪಂಗಿ. ಬಿ.ಪಿ.ವೆಂಕಟಮುನಿಯಪ್ಪ. ಎಂ.ನಾರಾಯಣಸ್ವಾಮಿ. ಶಿಡ್ಲಘಟ್ಟ ರಾಜಣ್ಣ, ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್, ಎಸ್.ಬಿ.ಮುನಿವೆಂಕಟಪ್ಪ, ಬಣಕನಹಳ್ಳಿ ನಟರಾಜ್, ಕೃಷ್ಣಮೂರ್ತಿ, ಹನುಮಂತಪ್ಪ, ಪ್ರವೀಣ್ ಗೌಡ, ವಿಜಯಕುಮಾರ್, ಹಾರೋಹಳ್ಳಿ ವೆಂಕಟೇಶ್, ವಡಗೂರು ರಾಮು, ವಿಜಯಕುಮಾರ್, ಸಿ.ಡಿ.ರಾಮಚಂದ್ರ, ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ, ಮಂಜುನಾಥ್, ವೆಂಟೇಶ್‌ಪತಿ, ಬಾಲಾಜಿ, ಅಪ್ಪಿ ನಾರಾಯಣಸ್ವಾಮಿ, ಮುದುವಾಡಿ ಮಂಜು, ಬಾಬು, ಓಹಿಲೇಶ್, ರಾಜೇಶ್ ಸಿಂಗ್, ರಾಕೇಶ್‌ಗೌಡ, ಮುಂತಾದವರು ಭಾಗವಹಿಸಿದ್ದರು,