ಡೆಂಗ್ಯೂ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.30:- ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಇದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 3493 ಜನರಿಗೆ ಪರೀಕ್ಷೆ ನಡೆಸಿದ್ದು ಇದರಲ್ಲಿ 481 ಜನರಿಗೆ ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು ಶೇ.14 ಪ್ರಕರಣಗಳು ಕಂಡು ಬಂದಿವೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ನಲ್ಲಿ ಶೇ.18 ಇದ್ದು ಈಗ ಶೇ.11ಕ್ಕೆ ಡೆಂಗ್ಯೂ ಪ್ರಕರಣಗಳು ಇಳಿದಿವೆ ಎಂದು ತಿಳಿಸಿದರು.
ನಮ್ಮಲ್ಲಿ ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿ ಇವೆ. ಇದು ಹೆಚ್ಚಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಡೆಂಗ್ಯೂ ಸೊಳ್ಳೆಗಳ ಕಡಿತದಿಂದ ಬರುತ್ತದೆ. ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಬಸ್ ಡಿಪೆÇಗಳು, ಚರಂಡಿಗಳು, ಹಳೆಯ ಟೈರ್‍ಗಳು, ತೆಂಗಿನ ಚಿಪ್ಪುಗಳಲ್ಲಿ, ನೀರಿನ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಜನರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ನಿಯಮಿತವಾಗಿ ಫಾಗಿಂಗ್ ಮಾಡಿಸಬೇಕು. ಇದರಿಂದಲೂ ಜನರಿಗೆ ಡೆಂಗ್ಯೂ ಕುರಿತು ಅರಿವು ಮೂಡಿಸಬೇಕು. ಈ ಸಂಬಂಧ ಗ್ರಾಮ ಪಂಚಾಯಿತಿಗಳು, ಪುರಸಭೆ ನಗರಸಭೆ, ಕಾರ್ಯ ನಿರ್ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸಂಬಂದಿಸಿದ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಬೇಕು. ನಿಯಮಿತವಾಗಿ ನೀರಿನ ಟ್ಯಾಂಕ್ ಗಳು ಹಾಗೂ ಓವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛ ಗೊಳಿಸಬೇಕು ಎಂದು ಸೂಚಿಸಿದರು.
ಗ್ಯಾಂಬುಷಿಯಾ ಮತ್ತು ಗಪ್ಪಿ ಫಿಶ್‍ಗಳನ್ನು ನೀರಿನ ತೊಟ್ಟಿಗಳಲ್ಲಿ ಬಿಡಬೇಕು. ಪಾರ್ಕ್ ಮತ್ತು ಜನರು ಹೆಚ್ಚು ಇರುವ ಪ್ರದೇಶಗಳಲ್ಲಿ ಸ್ಪಚ್ಛತೆ ಕಾಪಾಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜನರು ಡೆಂಗ್ಯೂ ಕುರಿತು ಆತಂಕ ಬೇಡ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಪ್ರಕರಣಗಳು ಕಂಡುಬಂದರೆ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಚಿಕಿತ್ಸೆಗೆ ನಿಗದಿತ ದರವನ್ನು ಮಾತ್ರ ವಿಧಿಸಬೇಕು. ಹೆಚ್ಚಿನ ದರ ಪಡೆದರೆ ಸಂಬಂದಿಸಿದ ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿರಿದ್ದರು.