ತಂಬಾಕು ಮತ್ತು ಶುಂಠಿ ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು ಕಾರ್ಯಾ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಜೂ.30:- ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದು ಅದರ ಬಗ್ಗೆ ರೈತರು ಮಾಹಿತಿ ಪಡೆಯುವ ಅಗತ್ಯವಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರಿನ ಕೃಷಿ ಜ್ಞಾನ ವಿಜ್ಞಾನ ವೇದಿಕೆ ಮತ್ತು ತಾಲೂಕು ಪಂಚಾಯತ್ ಕೃಷಿ ವಿಭಾಗದ ವತಿಯಿಂದ ಪಟ್ಟಣದ ಕೆ.ಆರ್.ಫಂಕ್ಷನ್ ಹಾಲ್ ನಲ್ಲಿ ತಾಲೂಕಿನ ಕೃಷಿ ಸಖಿಯರಿಗೆ ಶುಕ್ರವಾರ ಏರ್ಪಡಿಸಿದ್ದ “ತಂಬಾಕು ಮತ್ತು ಶುಂಠಿ ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು” ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆಯೇ ಹೊರತು ಭೂಮಿಯ ವಿಸ್ತೀರ್ಣ ಹೆಚ್ಚುತ್ತಿಲ್ಲ, ನಾವು ಹೊಂದಿರುವ ಭೂಮಿಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿಯನ್ನು ಪಡೆಯುವತ್ತ ಗಮನಹರಿಸಬೇಕಿದೆ ಎಂದರು. ಪ್ರತಿ ಗ್ರಾಮದ ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸರ್ಕಾರ ಕೃಷಿ ಸಖಿಯರನ್ನು ನೇಮಕ ಮಾಡಿದ್ದು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಓರ್ವ ಕೃಷಿ ಸಖಿಯರು ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಸರ್ಕಾರದ ವತಿಯಿಂದಲೇ ಗೌರವ ಧನ ನೀಡಲಾಗುತ್ತಿದೆ ಎಂದರು. ಪ್ರತಿಯೊಬ್ಬ ರೈತನಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸುವುದೇ ಕೃಷಿ ಸಖಿಯರ ಕೆಲಸವಾಗಿದೆ ಎಂದರು. ಕೃಷಿ ಸಖಿಯರು ಪರಿಪೂರ್ಣ ಮಾಹಿತಿ ಹೊಂದಿದ್ದಲ್ಲಿ ರೈತರು ಪ್ರಭುದ್ಧರಾಗಲು ಸಹಕಾರಿಯಾಗಲಿದೆ ಎಂದರು. ತರಬೇತಿ ಶಿಬಿರಗಳಲ್ಲಿ ಮಾಹಿತಿ ಪಡೆಯುವ ಕೃಷಿ ಸಖಿಯರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರೈತರಿಗೆ ನೆರವಾಗಲಿದ್ದಾರೆ ಎಂದರು.
ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸುವ ಅಗತ್ಯವಿದ್ದು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆಗುವ ಬೆಳೆ ನಷ್ಟದಿಂದ ಪರಿಹಾರವನ್ನು ಪಡೆಯಬಹುದು ಎಂದರು. ಬೆಳೆ ವಿಮೆ ಬಗ್ಗೆ ರೈತರ ಮನೆ ಬಾಗಿಲಿಗೆ ತೆರಳಿ ಮಾಹಿತಿ ನೀಡಲಾಗುತ್ತಿದ್ದು ರಾಗಿ, ಭತ್ತ, ಮುಸುಕಿನ ಜೋಳ, ಅಲಸಂದೆ ಮತ್ತಿತರ ಆಹಾರ ಪದಾರ್ಥಗಳು ವಿಮೆ ವ್ಯಾಪ್ತಿಗೆ ಒಳಪಡಲಿವೆ ಎಂದರು. ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಸಾಮಾನ್ಯ ನಾಗರೀಕ ಸೇವಾ ಕೇಂದ್ರ, ಕೃಷಿ ಇಲಾಖೆಯ ಕಚೇರಿಗಳು ಮತ್ತು ತಾವು ಖಾತೆ ಹೊಂದಿರುವ ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಬಹುದು ಎಂದು ಮಾಹಿತಿ ನೀಡಿದರು.
ಕೃಷಿ ಜ್ಞಾನ ವಿಜ್ಞಾನ ವೇದಿಕೆಯ ಸಂಸ್ಥಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ವಸಂತ್ ಕುಮಾರ್ ತಿಮಕಾಪುರ ಮಾತನಾಡಿ ಕೃಷಿ ಜ್ಞಾನ ವಿಜ್ಞಾನ ವೇದಿಕೆ ಮೂಲಕ ರಾಜ್ಯದ ವಿವಿಧಡೆ ಕಳೆದ 20 ವರ್ಷಗಳಿಂದ ರೈತರಿಗೆ ತರಬೇತಿ ನೀಡಲಾಗುತ್ತಿದ್ದು ರೈತರ ಆರ್ಥಿಕ ಸಬಲತೆಯನ್ನು ಉತ್ತಮಗೊಳಿಸಲಾಗಿದೆ ಎಂದರು. ತಂಬಾಕು ಮತ್ತು ಶುಂಠಿ ಬೆಳೆಗಳಲ್ಲಿ ರೈತರು ಅಳವಡಿಸಿಕೊಳ್ಳಬೇಕಾದ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಆಯ್ದ ಪ್ರಗತಿಪರ ರೈತರಿಗೆ ಔಷಧಿಗಳನ್ನು ಸಿಂಪಡಿಸಲು ಉಚಿತವಾಗಿ ಸ್ಪ್ರೇಯರ್ ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕೃಷಿ ವಿಭಾಗದ ವ್ಯವಸ್ಥಾಪಕ ಚೇತನ್, ಕೃಷಿ ಜ್ಞಾನ ವಿಜ್ಞಾನ ವೇದಿಕೆಯ ಡಾ.ಹರೀಶ್ ಮಾತನಾಡಿದರು.
ಮಾಹಿತಿ ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ್ದ ಕೃಷಿ ಸಖಿಯರು, ಪ್ರಗತಿಪರ ಕೃಷಿಕರು ಪಾಲ್ಗೊಂಡಿದ್ದರು