80.35 ಕೋಟಿ ರೂ.ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.30:- ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಲ್ಲಿ 80.35 ಕೋಟಿ ರೂ. ಕೊರತೆ ಆಯವ್ಯಯ ಮಂಡಿಸಿತು.
ವಿವಿಯ ಕ್ರಾಫರ್ಡ್‍ಭವನದಲ್ಲಿ ಶುಕ್ರವಾರ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ ಮೊದಲನೇ ಸಭೆಯಲ್ಲಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಆಯವ್ಯಯ ಮಂಡಿಸಿದರು.
2024-25ನೇ ಸಾಲಿನ ವಿಶ್ವವಿದ್ಯಾನಿಲಯದ ನಿರೀಕ್ಷಿತ ಆದಾಯ 277.9.39 ಕೋಟಿ (ಆರಂಭ ಶಿಲ್ಕು 3.10 ಕೋಟಿ) ಮತ್ತು ಒಟ್ಟಾರೆ ನಿರೀಕ್ಷಿತ ವೆಚ್ಚ 357.74 ಕೋಟಿಗಳಾಗಿದ್ದು, 80.35 ಕೊರತೆ ಇದೆ. ರಾಜ್ಯ ಸರ್ಕಾರದಿಂದ ವೇತನಾನುದಾನ 171.78 ಕೋಟಿ, ಪಿಂಚಣಿ ಅನುದಾನ 50 ಕೋಟಿ, ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 3 ಕೋಟಿ ರೂ. ಸೇರಿ 174.78 ಕೋಟಿ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.
ನಿರೀಕ್ಷಿತ ಆದಾಯ: 2024-25ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ನಿರೀಕ್ಷಿತ ಆಂತರಿಕ ಆದಾಯಗಳಿಂದ 99.50 ಕೋಟಿ ರೂ. ನಿರೀಕ್ಷಿಸಲಾಗಿದೆ. ಪ್ರವೇಶ, ನೋಂದಣಿ, ಸಂಯೋಜನ ಹಾಗೂ ಇನ್ನಿತರ ಶುಲ್ಕಗಳು 42 ಕೋಟಿ, ಸ್ಕೀಂ ಬಿ ಕೋರ್ಸ್‍ಗಳಿಂದ 3.50 ಕೋಟಿ, ಪರೀಕ್ಷಾ ಚಟುವಟಿಕೆಗಳಿಂದ 45 ಕೋಟಿ, ವಿವಿಯ ವಿವಿಧ ಆಸ್ತಿಗಳಿಂದ 3 ಕೋಟಿ, ಇತರೆ ಮೂಲಗಳಿಂದ 6 ಕೋಟಿ ರೂ. ನಿರೀಕ್ಷಿತ ಆದಾಯವಾಗಿದೆ.
ನಿರೀಕ್ಷಿತ ವೆಚ್ಚಗಳ ವಿವರ: ವೇತನ ಭ್ಯತೆಗೆ 170,37,60,000, ಪಿಂಚಣಿ 120 ಕೋಟಿ, ಸಾಮಾನ್ಯ ಆಡಳಿತ ವೆಚ್ಚಗಳು 3,09,90,000, ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗೆ 1,64,20,000, ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯಕ್ರಮಗಳಿಗೆ 26,93,25,000, ಕ್ಯಾಂಪಸ್ ನಿರ್ವಹಣೆಗೆ 21,12,50,000, ಪರೀಕ್ಷಾ ಚಟುವಟಿಕೆಗಳಿಗೆ 14,57,00,000 ರೂ. ಸೇರಿ ಒಟ್ಟು 357.75 ಕೋಟಿ ರೂ. ನಿಗದಿಪಡಿಸಲಾಗಿದೆ.
2022-23, 2023-24 ಮತ್ತು 2024-25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನವಾಗಿ ಕ್ರಮವಾಗಿ 56 ಕೋಟಿ, 63 ಕೋಟಿ ಮತ್ತು 70 ಕೋಟಿ ರೂ. ಕಡಿಮೆ ನೀಡಿದ್ದರಿಂದ ಈ ಆರ್ಥಿಕ ವರ್ಷದಲ್ಲಿ 80.35 ಕೋಟಿ ರೂ. ಕೊರತೆ ಆಯವ್ಯಯವನ್ನು ಮೈಸೂರು ವಿವಿ ಎದುರಿಸುತ್ತಿದೆ. ಅಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ವೆಚ್ಚಗಳನ್ನು ನಿಯಂತ್ರಿಸಲು ಕ್ರಮ ವಹಿಸಲಾಗುವುದು ಎಂದು ಹಣಕಾಸು ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಕ್ಯಾಂಪಸ್ ನಲ್ಲಿ ಬೀರ್ ಬಾಟಲ್ :ವಿವಿಯ ನಿರ್ವಹಣೆಗೆ 21 ಕೋಟಿ ರೂ.ಮೀಸಲಿಟ್ಟಿರುವುದರಿಂದ ಕ್ಯಾಂಪಸ್‍ನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಲವೆಡೆ ಬೀರ್ ಬಾಟಲ್‍ಗಳು, ನೀರಿನ ಬಾಟಲ್ ,ಪ್ಲಾಸ್ಟಿಕ್ ಬಿದ್ದಿರುತ್ತದೆ. ಗಂಗೋತ್ರಿ ಸ್ವಚ್ಛತೆ ಉಳಿಸಿಕೊಳ್ಳಬೇಕು. ನಿರ್ವಹಣೆಗೆ ಇಷ್ಟೊಂದು ಹಣ ಖರ್ಚು ಮಾಡುವಾಗ ಈ ಬಗ್ಗೆ ನಿಗಾ ಇಡಬೇಕು ಎಂದು ಶಿಕ್ಷಣ ಮಂಡಳಿ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಲಹೆ ನೀಡಿದರು.