ಜೀವನಮಟ್ಟ ಸುಧಾರಣೆಗೆ ದತ್ತಾಂಶ ಬಹಳ ಮುಖ್ಯ ಪಾತ್ರ ವಹಿಸಲಿದೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೩೦; ಅಂಕಿ ಸಂಖ್ಯೆಯ ರೂಪದ ಉತ್ತಮ ದತ್ತಾಂಶ ಎಲ್ಲರಿಗೂ ಉತ್ತಮ ಜೀವನಕ್ಕೆ ಕಾರಣವಾಗಲಿದೆ. ಜೀವನಮಟ್ಟ ಸುಧಾರಣೆಗೆ ದತ್ತಾಂಶ ಬಹಳ ಮುಖ್ಯ ಪಾತ್ರ ವಹಿಸಲಿದೆ ಎಂದು ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚನ್ನಬಸಪ್ಪ ಹೇಳಿದರು.ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ  ಸಾಂಖ್ಯಿಕ ತಜ್ಞ ಪ್ರೊ. ಪಿ.ಸಿ. ಮಹಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ “ನಿರ್ಧಾರ ಕೈಗೊಳ್ಳುವಲ್ಲಿ ದತ್ತಾಂಶದ ಉಪಯೋಗ” ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.ದತ್ತಾಂಶ (ಡೇಟಾ) ಎಂಬುವುದು ದೇಶದ ಆರ್ಥಿಕತೆಯ ಶಕ್ತಿ ಇದ್ದಂತೆ. ಅಂಕಿ-ಸಂಖ್ಯೆಗಳು ದೇಶದ ನೀತಿಯನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು. ಸಮಾಜ ಬದಲಾಗಬೇಕಾದರೆ ಆರ್ಥಿಕತೆ ಬೇಕು. ಆರ್ಥಿಕಾಭಿವೃದ್ಧಿಗೆ ಸಂಬಂಧಪಟ್ಟಂತೆ ಯೋಜನೆಗಳು ಅಗತ್ಯ. ಯೋಜನೆ ನಂತರ ನೀತಿ ಜಾರಿಯಾಗಬೇಕು. ಯೋಜನೆ, ನೀತಿ ಜಾರಿಯಾಗಬೇಕಾದರೆ ಅಂಕಿ ಸಂಖ್ಯೆಗಳ ದತ್ತಾಂಶದ ಆಧಾರದ ಮೇಲೆ ಯೋಜನೆ ರೂಪಿತವಾಗಲಿದೆ. ಇದರಿಂದ ದೇಶ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್.ರವಿಕುಮಾರ್ ಮಾತನಾಡಿ, ಅಂಕಿ-ಅಂಶಗಳ ಬಳಕೆ ಮತ್ತಷ್ಟು ಜನಪ್ರಿಯಗಳಿಸಲು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು, ಅಂಕಿ-ಅಂಶ ದಿನಾಚರಣೆ ಆಚರಿಸಲಾಗುತ್ತಿದೆ.  ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಲನೋಬಿಸ್ ಅವರು ಗಣಿತ ಶಾಸ್ತ್ರಕ್ಕೆ ಹಾಗೂ ಸಾಂಖ್ಯಿಕ ಇಲಾಖೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.ದೇಶದ ಅಭಿವೃದ್ಧಿಗೆ, ನೀತಿ ನಿರೂಪಣೆಗೆ ಅಂಕಿ-ಅಂಶಗಳ ಪಾತ್ರ ಮತ್ತು ಪ್ರಾಮುಖ್ಯತೆ ಕುರಿತು ಯುವ ಪೀಳಿಗೆಗೆ ವಿಶೇಷವಾಗಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.ಭದ್ರಾ ಮೇಲ್ದಂಡೆ ಯೋಜನೆಯ ಉಪನಿರ್ದೇಶಕಿ ಕುಮುದಾ ಮಾತನಾಡಿ, ಜೀವನದಲ್ಲಿ ದತ್ತಾಂಶ ಬಹಳ ಮಹತ್ವವನ್ನು ಪಡೆದಿದೆ. ದತ್ತಾಂಶದಿಂದ ಯೋಜನೆ ರೂಪಿಸಿಕೊಳ್ಳಲು ಸಹಾಯಕವಾಗಲಿದೆ ಎಂದರು.