ಕಳಪೆ ಉಪಹಾರ ಸೇವಿಸಿ ಜೇವರ್ಗಿ ಮೊರಾರ್ಜಿ ವಸತಿ ನಿಲಯದ ವಿದ್ಯಾರ್ಥಿನಿಯರು ಆಸ್ಪತ್ರೆಗೆ
ಕಲಬುರಗಿ:ಜೂ.29: ಕಳಪೆ ಉಪಹಾರವನ್ನು ಸೇವಿಸಿ ಜೇವರ್ಗಿ ಪಟ್ಟಣದ ಬಾಲಕಿಯರ ಮೊರಾರ್ಜಿ ವಸತಿ ನಿಲಯದ 17 ಜನ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಶನಿವಾರ ಬೆಳಿಗ್ಗೆ ವರದಿಯಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಏಳು ವಿದ್ಯಾರ್ಥಿನಿಯರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಹತ್ತು ಜನ ವಿದ್ಯಾರ್ಥಿಗಳು ಓಆರ್‍ಎಸ್ ಕುಡಿದು ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಬೆಳಿಗ್ಗೆ ಉಪಹಾರ ಮಾಡಿದ ನಂತರ ನೀರು ಕುಡಿದ ವಿದ್ಯಾರ್ಥಿನಿಯರಲ್ಲಿ 17 ಜನ ವಿದ್ಯಾರ್ಥಿನಿಯರು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಇನ್ನೂ ಕೆಲವರು ಹೊಟ್ಟೆನೋವಿನಿಂದ ನರಳಾಟ ಆರಂಭಿಸಿದರು. ಕೂಡಲೇ ಅವರಿಗೆ ಆಸ್ಪತ್ರೆಗೆ ಸೇರಿಸಲಾಯಿತು.
ಸ್ವಚ್ಛತೆಯಿಂದ ಅಡಿಗೆ ಮಾಡುವುದಿಲ್ಲ. ಕಾಳುಕಡಿಗಳು ಮತ್ತು ತರಕಾರಿಗಳು ಸೇರಿದಂತೆ ಅಕ್ಕಿ, ಅವಲಕ್ಕಿ ಮುಂತಾದ ಆಹಾರ ದಾಸ್ತಾನುಗಳನ್ನು ಸರಿಯಾಗಿ ಸುವ್ಯವಸ್ಥಿತ ರೀತಿಯಲ್ಲಿ ಇಡದೇ ಮನಸ್ಸಿಗೆ ಬಂದಂತೆ ಇಡುವುದರಿಂದ ನುಸಿ, ಬಾಲುಹುಳಗಳು ಉಪಹಾರದಲ್ಲಿ ಬರುವಂತಾಗುತ್ತದೆ. ಹಲವಾರು ಸಂದರ್ಭದಲ್ಲಿ ಕಳಪೆ ಆಹಾರವನ್ನು ಕಂಡು ವಿದ್ಯಾರ್ಥಿನಿಯರು ಏನಾದರೂ ಹೇಳಿದರೆ ಅಡಿಗೆದಾರರು ಅದನ್ನು ಸರಿಪಡಿಸದೇ ವಿದ್ಯಾರ್ಥಿನಿಯರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಪ್ರಿನ್ಸಿಪಾಲ್ ಶಿವಪುತ್ರಪ್ಪ ಕಕ್ಕಳಮೇಲಿ ಮತ್ತು ವಾರ್ಡನ್ ಶಕುಂತಲಾ ಹಿರೇಮಠ್ ಅವರು ಸಹ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಆಹಾರದ ಅಸುರಕ್ಷತೆಯ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಳ್ಳುವಂತಾಗಿದೆ.
ಮೊರಾಜಿ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ 38, ಏಳನೇ ತರಗತಿಯಲ್ಲಿ 50, 8ನೇ ತರಗತಿಯಲ್ಲಿ 50, 9ನೇ ತರಗತಿಯಲ್ಲಿ 50, ಹತ್ತನೇ ತರಗತಿಯಲ್ಲಿ 48 ಸೇರಿ ಒಟ್ಟು 236 ವಿದ್ಯಾರ್ಥಿನಿಯರು ಇದ್ದು, ಅವರೆಲ್ಲ ನಿತ್ಯ ಕಳಪೆ ಆಹಾರವನ್ನು ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಿನ್ಸಿಪಾಲರು ಮತ್ತು ವಾರ್ಡನ್ ಹೊಸಬರೇನಲ್ಲ. ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸಹ ವಿದ್ಯಾರ್ಥಿನಿಯರ ಊಟದ ಕಡೆಗೆ ಗಮನಹರಿಸದೇ ಇರುವುದು ನೋಡಿದರೆ ಅವರ ಕುಮ್ಮಕ್ಕೂ ಸಹ ಕಳಪೆ ಆಹಾರದಲ್ಲಿ ಇರುವ ಕುರಿತು ಅನುಮಾನ ಮೂಡಿಸುತ್ತದೆ. ಹೀಗಾಗಿ ಅವರಿಬ್ಬರ ವಿರುದ್ಧ ವಿದ್ಯಾರ್ಥಿನಿಯರು ಮತ್ತು ಪಾಲಕರು ಆಕ್ರೋಶಗೊಂಡಿದ್ದಾರೆ.
ಇನ್ನು ಅಡಿಗೆಯವರಾದ ಮಲ್ಲಮ್ಮ, ಬಸಮ್ಮ, ಸಿದ್ದಮ್ಮ, ಜಯಶ್ರೀ, ಕಮಲಾಬಾಯಿ, ಮರಿಯಮ್ಮ, ಕೆಂಚಮ್ಮ ಅವರೂ ಸಹ ಸರಿಯಾಗಿ ಹಾಗೂ ಗುಣಮಟ್ಟದ ಆಹಾರ ಮಾಡದೇ ಕಳಪೆ ಮಟ್ಟದಲ್ಲಿ ತಯಾರಿಸುತ್ತಿರುವುದು ವಿದ್ಯಾರ್ಥಿನಿಯರ ಬದುಕಿನಲ್ಲಿ ಚಲ್ಲಾಟವಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಅಡಿಗೆ ಮಾಡುವುದಲ್ಲದೇ ಕೆಟ್ಟ ತರಕಾರಿ, ಸಾಮಗ್ರಿಗಳನ್ನು ಹಾಕಿ ಬೇಕೋ ಬೇಡ ಎನ್ನುವ ರೀತಿಯಲ್ಲಿ ಅಡಿಗೆ ಮಾಡಿಕೊಂಡು ಹೋಗಿಬಿಡುತ್ತಾರೆ. ಸರಿಯಾಗಿ ಅನ್ನ ಕುದಿಯದೇ ಸಾಂಬಾರು ಸಹ ಸಮರ್ಪಕವಾಗಿ ಮಾಡದೇ ಹಸಿಬಿಸಿ ಮಾಡುವುದರಿಂದ ವಿದ್ಯಾರ್ಥಿನಿಯರು ಉಪಹಾರ ಹಾಗೂ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ಊಟ ಹಾಗೂ ಉಪಹಾರ ಮಾಡದೇ ಹೋದಲ್ಲಿ ಉಪವಾಸ ಬೀಳುವಂತಾಗುತ್ತದೆ. ಹೀಗಾಗಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೇಗೋ ಗಟ್ಟಿ ಮನಸ್ಸು ಮಾಡಿಕೊಂಡು ಊಟ, ಉಪಹಾರ ಮಾಡುತ್ತ ಬಂದಿದ್ದು, ಈಗ ಕಳಪೆ ಉಪಹಾರದಿಂದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದಾರೆ.
ಕಾಳುಕಡಿಗಳು ಸ್ವಚ್ಛ ಇಲ್ಲ. ಅಕ್ಕಿಯಲ್ಲಿ ಮತ್ತು ಅವಲಕ್ಕಿಯಲ್ಲಿ ನುಸಿ, ಬಾಲುಹುಳಗಳು ಕಂಡುಬರುತ್ತವೆ. ಆದಾಗ್ಯೂ, ಅದನ್ನು ಸ್ವಚ್ಛಗೊಳಿಸದೇ ಹಾಗೆಯೇ ಅಡಿಗೆ ಮಾಡುತ್ತಿರುವುದು ಕಳಪೆ ಆಹಾರಕ್ಕೆ ಮುಖ್ಯ ಕಾರಣವಾಗಿದೆ.
ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ್ದಾಗಿದೆ. ಶಿಕ್ಷಕರು ಒಳ್ಳೆಯ ಶಿಕ್ಷಣ ನೀಡುತ್ತಾರೆ ಎಂದು ಹೇಳುವ ವಿದ್ಯಾರ್ಥಿನಿಯರು, ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಕಳವಳ ವ್ಯಕ್ತಪಡಿಸುತ್ತಾರೆ.
ಕಳಪೆ ಉಪಹಾರ ಸೇವಿಸಿ ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತಯೇ ತಕ್ಷಣ ತಹಸಿಲ್ದಾರ್ ಮಲ್ಲಣ್ಣ ಯಲಗೋಡ್, ಸಿಪಿಐ ಮತ್ತು ಪಿಎಸ್‍ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಆಗಿರುವ ಸಮಸ್ಯೆ ನಿವಾರಣೆ ಮಾಡಬೇಕು. ಇಲ್ಲದೇ ಹೋದಲ್ಲಿ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ತಡೆಯಲು ಆಗದು. ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಈ ಕುರಿತು ಗಮನಹರಿಸಬೇಕಾಗಿದೆ.