ಕಾಯಕ ಕಲಿಸಿದ ನಾಯಕ ಬಸವಣ್ಣ
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೩೦; ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ಮತ್ತು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಆವರಗೆರೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಆವರಗೆರೆ ಪ್ರೌಢಶಾಲಾ ಆವರಣದಲ್ಲಿ ನಡೆಯಿತು. ತಾಯಿ ಭುವನೇಶ್ವರಿ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವೇದಿಕೆಯಲ್ಲಿದ್ದ ಗಣ್ಯರು ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ರಕಾಶ್ ಎಂ.ಬಿ. ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕರಾದ ಶರಣ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತವಿಕವಾಗಿ ಮಾತನಾಡಿ, ಮೊದಲಿಗೆ ದತ್ತಿದಾನಿಗಳನ್ನು ಸ್ಮರಿಸಿ, ದಾನಿಗಳ ಹೆಸರಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ನಾಡು-ನುಡಿ ಸಂಸ್ಕೃತಿ, ಶಿಲ್ಪ ಕಲೆ ಹಾಗೂ ವಚನ ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ, ದಾಸ ಸಾಹಿತ್ಯ ಜೊತೆಗೆ ಆರೋಗ್ಯ ಸಲಹೆಗಳು ಕಾನೂನು ಸಲಹೆಗಳು, ರಸ್ತೆ ಸಂಚಾರ ಸಲಹೆಗಳು, ಮತದಾನ ಜಾಗೃತಿ ಮೂಡಿಸುವಂತ ಜನಪರ ಕೆಲಸಗಳನ್ನು ಮಾಡುತ್ತದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ೧೯೧೫ ಮೇ ೫ ರಂದು ಅಂದಿನ ಮೈಸೂರು ಸಂಸ್ಥಾನದ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರು ಚಾಲನೆ ನೀಡಿದರು ಅವರ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸಿದರು ಎಂದು ತಿಳಿಸಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ಪ್ರಧಾನ ಕಾರ್ಯದರ್ಶಿಗಳಾದ ಶರಣ ವಿಶೇಶ್ವರಯ್ಯ ಬಿ.ಎ. ಇವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಉಪನ್ಯಾಸ ನೀಡುತ್ತಾ, ಅನ್ಯಾಯ ಶೋಷಣೆ ಮೂಢನಂಬಿಕೆ ವಿರುದ್ಧ ದನಿ ಎತ್ತಿದ ಬಸವಣ್ಣನವರು ಸಾವಿರಾರು ವೇಶ್ಯೆಯರನ್ನು ಶರಣೆಯರನ್ನಾಗಿ ಮಾಡಿ ಸಮಾಜವನ್ನು ಪರಿವರ್ತನೆಗೊಳಿಸಿ, ಕಾಯಕವನ್ನು ಕೈಲಾಸವನ್ನಾಗಿಸಿ ದಯೆಯನ್ನು ಧರ್ಮವಾಗಿಸಿ, ನೀರನ್ನು ತೀರ್ಥವಾಗಿಸಿ ಅನ್ನವನ್ನು ಪ್ರಸಾದವನ್ನಾಗಿಸಿ, ಆಚಾರವನ್ನು ಸ್ವರ್ಗವಾಗಿಸಿ ಅನಾಚಾರವನ್ನು ನರಕವನ್ನಾಗಿಸಿ, ದೇಹವನ್ನು ದೇಗುವನ್ನಾಗಿಸಿ ಅಂಗೈಯಲ್ಲಿ ಲಿಂಗ ಕೊಟ್ಟು ಅಕ್ಷರ ಇಲ್ಲದವರಿಗೆ ಅಕ್ಷರ ಕೊಟ್ಟು, ಧರ್ಮ ಇಲ್ಲದವರಿಗೆ ಧರ್ಮ ಕೊಟ್ಟು ಕೆಳಗೆ ಬಿದ್ದವರನ್ನು ಮೇಲೆತ್ತಿ ತನ್ನಂತೆ ಮಾಡಿಕೊಂಡು, ವರ್ಣಭೇದ, ಲಿಂಗಭೇದ, ಜಾತಿಭೇದ, ವರ್ಗಭೇದ ಇಲ್ಲದ ಸಮಸಮಾಜ ಕಟ್ಟಲು, ಶೋಷಣೆಯಿಂದ ಸರ್ವರನ್ನೂ ಮುಕ್ತಗೊಳಿಸಲು ಅಣ್ಣನವರು ತಮ್ಮ ಜೀವಮಾನವಿಡೀ ಶ್ರಮಿಸಿದರು. ಅದಕ್ಕಾಗಿ ಜನಪದರು ಹೇಳುವಂತೆ ಬಸವಣ್ಣ ಕಾಯಕ ಕಲಿಸುದಕ ನಾಯಕ, ಉಣ ಕಲಿಸಿದ, ಉಡ ಕಲಿಸಿದ, ನಡೆ ಕಲಿಸಿದ, ನುಡಿ ಕಲಿಸಿದ, ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತಹ ಹಲವಾರು ವಚನಗಳ ಮೂಲಕ ಮಾತನಾಡುವುದನ್ನು ಕಲಿಸಿದರು. ಕಲ್ಲು ಮಣ್ಣು ಕಟ್ಟಿಗೆ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ ದೇವ ನೋಡಾ ಎಂದು ನಮ್ಮೊಳಗಿನ ದೈವತ್ವವನ್ನು ಪರಿಚಯಿಸಿದ ಬಸವಣ್ಣ ಮೂಢನಂಬಿಕೆಗಳನ್ನು ಓಡಸಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಲು ದಿಟ್ಟ ಹೆಜ್ಜೆ ಇಟ್ಟರು.ಮಹಿಳಾ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ ಅವರು ತನ್ನ ಅಕ್ಕ ನಾಗಮ್ಮನಿಗೆ ಮೊದಲು ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿದರು. ಹಂಚಿ ಉಣ್ಣುವ ’ದಾಸೋಹಂ ಭಾವ’ವನ್ನು ಬೆಳೆಸಿ ಪರವನ್ನು ಗೆಲ್ಲುವ ಸಾಧನ ಇಹದಲ್ಲೇ ಇದೆ ಎಂದು ತೋರಿಸಿಕೊಟ್ಟರು. ಇಂತಹ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.