ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೭: ದುಶ್ಚಟಗಳಿಂದ ದೂರವಿದ್ದರೆ ಸಮಾಜದಲ್ಲಿ ಗೌರವ ಲಭಿಸುತ್ತದೆ ಎಂದು ಎನ್.ಪಿ.ಇ.ಪಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು. ತಾಲೂಕಿನ ವಡ್ಡರ ಸಿದ್ದವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತವು ಜೀವನದ ಪ್ರಮುಖ ಘಟ್ಟವಾಗಿದ್ದು ಎನ್.ಪಿ.ಇ.ಪಿ ಕಾರ್ಯಕ್ರಮದಡಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು 12530 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಆರೋಗ್ಯ ಹದಗೆಡುವುದಲ್ಲದೆ ಹಣವೂ ವ್ಯರ್ಥವಾಗುತ್ತದೆ. ದುಶ್ಷಟವಿರುವ ವ್ಯಕ್ತಿ ತನ್ನ ಆರೋಗ್ಯ ಕಳೆದುಕೊಂಡು ಕುಟುಂಬ ಮತ್ತು ಸಮಾಜದ ನಿಂದನೆಗೆ ಒಳಗಾಗುತ್ತಾನೆ ಎಂದು ತಿಳಿಸಿದರು. ಮಾದಕ ವಸ್ತುಗಳಿಗೆ ಕಡಿವಾಣ ಹಾಕಿದರೆ ಸುಂದರ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡಾಗ ಸ್ವಾಸ್ಥö್ಯ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಜೀವನ ಕೌಶಲ ಬೆಳೆಸುವ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಮುಖ್ಯ ಶಿಕ್ಷಕ ಟಿ.ತಿಮ್ಮಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು. ಯಾವುದೇ ರೀತಿಯ ದುಶ್ಚಟಗಳನ್ನು ರೂಢಿಸಿಕೊಳ್ಳದೆ ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು. ಸಹ ಶಿಕ್ಷಕರಾದ ತಿಮ್ಮಾರೆಡ್ಡಿ, ಡಿ.ಎಸ್.ಸುಮಾ, ಓಬಣ್ಣ, ಕಾಡಪ್ಪಸ್ವಾಮಿ, ಡಾ. ಮಹೇಶ್ ಮತ್ತು ವಿದ್ಯಾರ್ಥಿಗಳು ಇದ್ದರು.