ಹಾಲಿನ ದರ ಹೆಚ್ಚಳ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಕಲಬುರಗಿ,ಜೂ.29-ಹಾಲಿನ ದರ ಹೆಚ್ಚಳ ವಿರೋಧಿಸಿ ಮತ್ತು ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ನಗರ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಹಸು ಮತ್ತು ಹಾಲಿನ ಕ್ಯಾನ್‍ಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಹಾಲಿನ ದರ ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು, ಸರ್ಕಾರ ಕಳೆದ ಬಜೆಟ್‍ನಲ್ಲಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದು, ಇದುವರೆಗೆ ರೈತರಿಗೆ ಪಾವತಿಯಾಗಿಲ್ಲ. ಕೂಡಲೇ ಪಾವತಿಸಬೇಕು, ರೈತ ವಿದ್ಯಾನಿಧಿ, ಭೂ-ಸಿರಿ ಯೋಜನೆ ಮರು ಜಾರಿ ಮಾಡಬೇಕು, ಕಿಸಾನ್ ಸಮ್ಮಾನ್ ಯೋಜನೆ ಅಡಿ ನೀಡುತ್ತಿದ್ದ ರೂ.4 ಸಾವಿರ ರೂ ಮತ್ತು ರೈತರ ಡ್ರಿಪ್ ಯೋಜನೆಯ ಶೇ.75 ಸಹಾಯಧನ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಸಕ ಬಸವರಾಜ ಮತ್ತಿಮೂಡ, ಗ್ರಾಮೀಣ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಅಧ್ಯಕ್ಷ ಚಂದು ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ರೈತ ಮೋರ್ಚಾ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ, ನಗರ ಅಧ್ಯಕ್ಷ ಲಿಂಗರಾಜ ಧೂಳಗೊಂಡ, ಮಲ್ಲಣ್ಣ ಕುಲಕರ್ಣಿ, ಶ್ರೀಶೈಲ ಪಾಟೀಲ, ಅಶೋಕ ಬಗಲಿ, ಮಹಾದೇವ ಬೆಳಮಗಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.