ಮನುಕುಲದ ಉದ್ಧಾರಕ ಡಾ.ಬಿ.ಆರ್ ಅಂಬೇಡ್ಕರ್ ; ಡಾ.ಮೇಧಾವಿನಿ ಎಸ್.ಕಟ್ಟಿ
ಕಲಬುರಗಿ,ಜೂ.29-ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಕುಲದ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ)ರಾದ ಡಾ.ಮೇಧಾವಿನಿ ಎಸ್.ಕಟ್ಟಿ ಹೇಳಿದರು.
ನಗರದ ಕೆಪಿಇ ಶಿಕ್ಷಣ ಸಂಸ್ಥೆಯ ಡಾ.ಅಂಬೇಡ್ಕರ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2023 -24ನೇ ಶೈಕ್ಷಣಿಕ ಸಾಲಿನ ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ತಿಳಿಯುವುದು ಅಥವಾ ಅರ್ಥ ಮಾಡಿಕೊಳ್ಳುವುದು ಒಂದೇ. ಭಾರತವನ್ನು ಒಮ್ಮೆ ಸುತ್ತಿ ನೋಡುವುದು ಒಂದೇ. ಅವರ ವಿಚಾರವನ್ನು ವಿಶ್ವವೇ ಒಪ್ಪಿಕೊಂಡಿದೆ. ಆದರೆ, ಅವರನ್ನು ನಾವಿನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎನ್ನುವುದು ತುಂಬಾ ಕಳವಳಕಾರಿ ಸಂಗತಿ ಎಂದರು.
ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ಚೇತನ, ಭವ್ಯ ಭವಿಷ್ಯತಿನ ಭಾರತವನ್ನು ಕಟ್ಟುವ ಶಕ್ತಿ ಹೊಂದಿದ ಏಕೈಕ ವ್ಯಕ್ತಿ ಅಂಬೇಡ್ಕರ್ ರವರು. ಅವರ ಜ್ಞಾನ ಇಡೀ ಜಗತ್ತು ಒಪ್ಪಿಕೊಂಡಿದೆ ಅದಕ್ಕಾಗಿಯೇ ಅವರನ್ನು ಜ್ಞಾನದ ಸಂಕೇತ ಎಂದು ಸಾರಿದೆ. ಮಹಿಳಾ ಸ್ವಾತಂತ್ರ್ಯ, ಮತದಾನದ ಮಹತ್ವ, ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಜಾತಿ ಪದ್ಧತಿ, ಅನಿಷ್ಟ ಮೌಢ್ಯ ವಿರುದ್ಧ ಹೋರಾಡಿದ್ದಾರೆ. ಸುಮಾರು 60ಕ್ಕೂ ಹೆಚ್ಚು ವಿಷಯಗಳಲ್ಲಿ ಪರಿಪೂರ್ಣತೆಯನ್ನು ಹೊಂದಿದ ವ್ಯಕ್ತಿ ಬಾಬಾ ಸಾಹೇಬರು. ಅವರ ಜ್ಞಾನ ಅರಿಯಲು ಯುವಕ, ಯುವತಿಯರು ಅವರ ಕೃತಿಗಳನ್ನು ಹೆಚ್ಚು ಓದಬೇಕು ಎಂದು ಹೇಳಿದರು.
ಸಮಾರಂಭದ ಮುಖ್ಯ ಭಾಷಣಕಾರರಾದ ಕಡಗಂಚಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಅಪ್ಪಗೆರೆ ಸೋಮಶೇಖರ್ ಅವರು ಮಾತನಾಡುತ್ತ, ಬಾಬಾ ಸಾಹೇಬರ ವಿಚಾರಗಳು ಜಗತ್ತಿಗೆ ಅನಿವಾರ್ಯವಾಗಿವೆ. ಏಕೆಂದರೆ ಜಗತ್ತಿನ ಬಹುದೊಡ್ಡ ಅಹಿಂಸವಾದಿ ಅಂಬೇಡ್ಕರ್ ಆಗಿದ್ದರು. ಮಾನಸಿಕ ಗುಲಾಮಗಿರಿಂದ ಹೊರ ಬಂದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಮೆದುಳುಗಳನ್ನು ಮತ್ತು ಮನಸುಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು ಎಂದರೆ ಭಾರತದ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಜೀವನವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರ ಜೀವನ ಬುದ್ಧನ ಮೂಲಕ ಆರಂಭಗೊಂಡು ಅವರ ಕೊನೆಯ ದಿನಗಳು ಕೂಡ ಬುದ್ಧ ಮತ್ತು ಆತನ ಧಮ್ಮ ಕೃತಿ ಬರೆಯುವುದರ ಮೂಲಕ ಕಂಡುಕೊಂಡಿದ್ದಾರೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ತಿನ ಭಾರತವನ್ನು ಕಟ್ಟಬೇಕಾದರೆ ತಾವುಗಳು ಒಳ್ಳೆಯ ಅಧ್ಯಯನ ಮತ್ತು ಅಧ್ಯಾಪನದಲ್ಲಿ ತೊಡಗಿಸಿಕೊಂಡು ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅವರು ವಹಿಸಿದ್ದರು ವೇದಿಕೆಯ ಮೇಲೆ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಶೀಲವಂತ, ಕಾಲೇಜಿನ
ಪ್ರಾಚಾರ್ಯರಾದ ಡಾ. ವಿಜಯಕುಮಾರ್ ಡಿ, ಐಕ್ಯೂಏಸಿ ಸಂಯೋಜಕರಾದ ಡಾ. ನಿರ್ಮಲ ಸಿರಗಾಪೂರ ಇದ್ದರು.
ಕಾಲೇಜಿನ ಡಾ. ಅಂಬೇಡ್ಕರ್ ವಿಚಾರ ವೇದಿಕೆಯ ಸಂಯೋಜಕರಾದ ಡಾ. ಗಾಂಧೀಜಿ ಮೋಳಕೆರೆಯವರು ಸ್ವಾಗತ ಮತ್ತು ಪ್ರಾಸ್ತವಿಕ ಮಾತನಾಡಿದರು. ಡಾ.ವಸಂತ್ ನಾಶಿ ನಿರೂಪಿಸಿದರು, ಸಿದ್ದಪ್ಪ ಕಾಂತ ವಂದಿಸಿದರು.