ಶ್ರೇಷ್ಟ ಶಿಕ್ಷಣ ತಜ್ಞ, ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ
ಕಲಬುರಗಿ:ಸೆ.26: ತಲಾ-ತಲಾಂತರಗಳಿಂದ ಶೋಷಣೆಗೆ ಒಳಗಾಗಿದ್ದ ಮಹಿಳೆಯರಿಗೆ, ಶೋಷಿತ ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ, ಸಮಾಜದಲ್ಲಿ ತುಂಬಿದ್ದ ಅನಿಷ್ಟ ಸಂಪ್ರದಾಯಗಳನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಈಶ್ವರಚಂದ್ರ ವಿದ್ಯಾಸಾಗರ, ಲೇಖಕರಾಗಿ, ಶಿಕ್ಷಣತಜ್ಞರಾಗಿ, ಸಮಾಜ ಸುಧಾರಕರಾಗಿ ಬಹುಮುಖ ವ್ಯಕ್ತಿತ್ವದ ಮೂಲಕ ದೇಶಕ್ಕೆ ಅಮೋಘ ಸೇವೆ ಸಲ್ಲಿಸಿದ ಮಹಾನ ಮಾನವತಾವಾದಿಯಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಈಶ್ವರಚಂದ್ರ ವಿದ್ಯಾಸಾಗರ್‍ರ 204ನೇ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾಸಾಗರ ಅವರಲ್ಲಿನ ಜ್ಞಾನವನ್ನು ಕಂಡು ಅವರ ಗುರುಗಳು ಇವರನ್ನು ‘ವಿದ್ಯಾಸಾಗರ’, ಸಮಾಜ ಸೇವೆಯನ್ನು ಕಂಡು ಜನರು ಪ್ರೀತಿಯಿಂದ ‘ಕರುಣಾಸಾಗರ’, ‘ದಯಾಸಾಗರ’ ಮತ್ತು ರವಿಂದ್ರನಾಥ ಟ್ಯಾಗೊರರು ‘ಮಾನವತೆಯ ಶ್ರೇಷ್ಠ ರೂಪ’ವೆಂದು ಕರೆದಿರುವುದು ನಾವು ಗಮನಸಿದರೆ, ವಿದ್ಯಾಸಾಗರ ಅವರ ಮೇರು ವ್ಯಕ್ತಿತ್ವ ನಮಗೆ ಗೋಚರವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವಿದ್ಯಾಸಾಗರರು ಶಿಕ್ಷಣ ಪದ್ಧತಿಯಲ್ಲಿ ಅನೇಕ ಸುಧಾರಣೆಗೊಳಿಸಿದರು. ಹೊಸ ಸವಾಲುಗಳನ್ನು ಎದುರಿಸಲು ಶಕ್ತವಾದ ಶಿಕ್ಷಣ ಪದ್ದತಿ ರೂಪುಗೊಳ್ಳಬೇಕು, ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯವೆಂಬ ನಂಬಿಕೆಯನ್ನು ಹೊಂದಿದ್ದ ಅವರು, ಶಿಕ್ಷಣವನ್ನು ಎಲ್ಲರೂ ಕಡ್ಡಾಯವಾಗಿ ಪಡೆಯಬೇಕೆಂದು ಅನೇಕ ಗ್ರಾಮಗಳಿಗೆ ತೆರಳಿ ವ್ಯಾಪಕವಾದ ಪ್ರಚಾರವನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ನಿಲೊಫರ್ ಶೇಖ್, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ವಿಜಯಲಕ್ಷ್ಮೀ ಹಾಗೂ ವಿದ್ಯಾರ್ಥಿಗಳಿದ್ದರು.