ರಾಷ್ಟ್ರದ ಅಭಿವೃದ್ಧಿಗೆ ಮೇಕ್ ಇನ್ ಇಂಡಿಯಾ ಪೂರಕ
ಕಲಬುರಗಿ:ಸೆ.26: ಸರಕು-ಸೇವೆಗಳನ್ನು ದೇಶದಲ್ಲೇ ಉತ್ಪಾದನೆ ಮಾಡುವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದರಿಂದ ಮೂರು ವಲಯಗಳು ಬೆಳವಣಿಗೆ ಹೊಂದುತ್ತವೆ. ನಿರುದ್ಯೋಗ, ಬಡತನ ನಿವಾರಣೆಯಾಗುತ್ತದೆ. ಇಂತಹ ಪರಿಕಲ್ಪನೆಯನ್ನು ಹೊಂದಿರುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಉಪಕ್ರಮ ಯೋಜನೆಯಾದ ‘ಮೇಕ್ ಇನ್ ಇಂಡಿಯಾ’ವು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಶಿಯಾ)ದ ಮಾಫಸಿಲ್ ಅಧ್ಯಕ್ಷ ಭೀಮಾಶಂಕರ ಬಿ.ಪಾಟೀಲ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯ ‘ಗೆಟ್ಸ್ ವಿಜ್ಞಾನ ಮತ್ತು ವಾಣಿಜ್ಯ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಮೇಕ್ ಇನ್ ಇಂಡಿಯಾದ ದಶಮಾನೋತ್ಸವ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉತ್ಪಾದನೆ, ಸೇವಾ ವಲಯಗಳಲ್ಲಿ ಅನೇಕ ಯುವಕರು ನೌಕರಿಗಾಗಿಯೇ ವಯಸ್ಸು ಸವೆಸಿ, ನೌಕರಿ ದೊರೆಯದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ನೀವು ಸೂಕ್ತ ತರಬೇತಿ, ಅನುಭವ ಪಡೆದು ನಮ್ಮ ದೇಶದಲ್ಲಿಯೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಉದ್ಯಮಪತಿಯಾಗಿ ಉದ್ಯೋಗವನ್ನು ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಯುವಕರಿಗೆ ಕರೆ ನೀಡಿದರು.
ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ‘ಮೇಕ್ ಇನ್ ಇಂಡಿಯಾ’ವು ಉತ್ತಮ ಯೋಜನೆಯಾಗಿದ್ದು, ಅದರ ಸುಪಯೋಗವನ್ನು ಮಾಡಿಕೊಳ್ಳಬೇಕು. ಇದು ಜಾರಿಗೊಂಡು ಒಂದು ದಶಕವಾಗಿದೆ. ಹೊಸ ಮನೋಭಾವ, ಹೊಸ ವಲಯ, ಹೊಸ ಪರಿಸರ ಮತ್ತು ಹೊಸ ಪ್ರಕ್ರಿಯೆ ಎಂಬ ನಾಲ್ಕು ಆಧಾರ ಸ್ಥಂಭಗಳನ್ನು ಯೋಜನೆ ಹೊಂದಿದೆ. ‘ಶೂನ್ಯ ದೋಷ, ಶೂನ್ಯ ಪರಿಣಾಮ’ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ. ‘ಸಿಂಹ’ ಯೋಜನೆಯ ಚಿಹ್ನೆಯಾಗಿದ್ದು, ಧೈರ್ಯ, ಆತ್ಮಾವಲೋಕನ, ಬದ್ದತೆಯ ಕಾರ್ಯ ಆಶಯಗಳನ್ನು ಹೊಂದಿದೆ. ಯುವಕರು ಇದರ ಬಗ್ಗೆ ತಿಳಿದುಕೊಂಡು ಉದ್ಯಮಗಳನ್ನು ಸ್ಥಾಪಿಸುವುದು ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ್, ಉಪನ್ಯಾಕರಾದ ಶಿವಲಿಂಗಪ್ಪ, ಸಾಯಿಕುಮಾರ ಮೋರೆ, ಸಿಬ್ಬಂದಿ ಭರತಕುಮಾರ ನಾಗೊಂಡ ಸೇರಿದಂತೆ ಇನ್ನಿತರರಿದ್ದರು.