ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ
ಕಲಬುರಗಿ:ಸೆ.26:ಕಲಬುರಗಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಇನ್‍ಟ್ಯಾಕ್ ಅಧ್ಯಾಯ ಕಲಬುರಗಿ ಹಾಗೂ ಡಾ. ಶಿವಕುಮಾರ ಸ್ವಾಮಿಜಿ ಸ್ಕೂಲ್ ಆಫ ಆರ್ಕಿಟೆಕ್ಚರ್ (ಪಿ.ಡಿ.ಎ) ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2024 ರ ಅಂಗವಾಗಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಕಲಬುರಗಿಯ ಕೋಟೆಯಲ್ಲಿ ಬುಧವಾರ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಕು.ಮೀನಾಕ್ಷಿ ಆರ್ಯ ಅವರು ಹಸಿರು ನಿಶಾನೆಯನ್ನು ತೋರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶಿಯ-ವಿದೇಶಿಯ ಪ್ರವಾಸಿಗರು ನಿರಂತರವಾಗಿ ಆಗಮಿಸುತ್ತಿದ್ದು, ನಮ್ಮ ಭಾಗದ ಪ್ರವಾಸಿ ತಾಣಗಳಲ್ಲಿ ಈ ರೀತಿಯ ಪಾರಂಪರಿಕ ನಡಿಗೆಗಳನ್ನು ಆಯೋಜಿಸುವುದರ ಮೂಲಕ ಪ್ರವಾಸಿಗರನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸರ್ಕಾರಿ (ಸ್ವಾಯತ್ತ) ಕಾಲೇಜಿನ ಮುಖ್ಯಸ್ಥರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ.ಎಸ್.ಕುಂಬಾರ ಅವರು ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ವಿಷಯ ಕುರಿತು ಮಾತನಾಡಿದರು.
ಇನ್‍ಟ್ಯಾಕ್ ಕಲಬುರಗಿ ಅಧ್ಯಾಯದ ಸಂಯೋಜಕರಾದ ಡಾ.ಶಂಭುಲಿಂಗ ಎಸ್. ವಾಣಿ ಅವರು ಕಲಬುರಗಿ ಪ್ರದೇಶದ ಇತಿಹಾಸ ಮತ್ತು ಪರಂಪರೆ ಕುರಿತು ಹಾಗೂ ಕಲಬುರಗಿ ಕೋಟೆಯ ಎಲ್ಲಾ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅವುಗಳ ಪ್ರಮುಖ್ಯತೆಯನ್ನು ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಎಸ್.ಗುಲಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಅಧಿಕಾರಿ ಸಂಜುಕುಮಾರ ಟೈಗರ್, ಇನ್‍ಟ್ಯಾಕ್ ಕಲಬುರಗಿ ಸಂಘಟನಾ ಕಾರ್ಯದರ್ಶಿಗಳಾದ ಡಾ.ಪರ್ವಿನ್, ಉರ್-ರಿಜ್ವಾನ್ ಸಿದ್ದಿಕಿ, ಡಾ. ನಬಿ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳು, ಪ್ರವಾಸಿ ಮಿತ್ರರು, ಪ್ರವಾಸಿ ಮಾರ್ಗದರ್ಶಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್‍ಟ್ಯಾಕ್ ಸಹ ಸಂಯೋಜಕ ಡಾ. ಶಶಿಶೇಖರ ರೆಡ್ಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ -2024 ರ ಅಂಗವಾಗಿ ಅಂತರ ಕಾಲೇಜು ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಶುಕ್ರವಾರ ಆಯೋಜಿಸಲಾಗಿತ್ತು. “ಪ್ರವಾಸೋದ್ಯಮ ಮತ್ತು ಶಾಂತಿ” ವಿಷಯದ ಕುರಿತು ಹಮ್ಮಿಕೊಳ್ಳಲಾದ ಪ್ರಬಂಧ ಸ್ಪರ್ಧೆಯಲ್ಲಿ 70 ವಿದ್ಯಾರ್ಥಿಗಳು ಹಾಗೂ “ಕಲ್ಯಾಣ ಕರ್ನಾಟಕ ಪ್ರಮುಖ ಸ್ಥಳಗಳ ಕುರಿತು ಭಾಷಣ ಸ್ಪರ್ಧೆಯಲ್ಲಿ 20 ವಿದ್ಯಾರ್ಥಿಗಳು ಭಾಗವಹಿಸಿದ್ದರು.