ಚಿತ್ತಾಪುರದಲ್ಲಿ ಮಳೆಗೆ ಮನೆ ಕುಸಿತ
ಚಿತ್ತಾಪುರ,ಸೆ.26-ಬುಧವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಗೊಬ್ಬುರ ಗಲ್ಲಿಯಲ್ಲಿ ಮನೆ ಕುಸಿದಿರುವ ಘಟನೆ ನಡೆದಿದೆ.
ತನುಜಾ ಸುಭಾಷ ವಾರದ್ ಎಂಬುವವರ ಮನೆ ಕುಸಿದಿದ್ದು, ಈ ಮನೆ ಕುಸಿದು ಮಲ್ಲಿಕಾರ್ಜುನ ಬಸವರಾಜ ವಾರದ ಅವರ ಮನೆ ಮೇಲೆ ಬಿದ್ದಿದ್ದರಿಂದ ಆ ಮನೆಯೂ ಸಂಪೂರ್ಣ ಕುಸಿದು ಹೋಗಿದೆ.
ಅದೃಷ್ಟ ವಶಾತ್ ಈ ವೇಳೆ ಮನೆಯವರು ಹೊರಗಡೆ ಇದ್ದುದ್ದರಿಂದ ಅನಾಹುತ ತಪ್ಪಿದಂತಾಗಿದೆ. ಮನೆಯೊಳಗಿದ್ದ ಧವಸ ಧಾನ್ಯ ಸೇರಿದಂತೆ ಗೃಹ ಬಳಕೆಯ ಇತರೆ ಸಾಮಗ್ರಿಗಳು ಹಾಳಾಗಿವೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ತಲಾಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದ ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಸರ್ಕಾರ ಅಗತ್ಯವಾದ ನೆರವು ನೀಡಬೇಕು ಮತ್ತು ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.