ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ
ಭಾಲ್ಕಿ:ಜೂ.29:ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರ ನಿರ್ದೇಶನದಂತೆ,ಪಟ್ಟಣದಾದ್ಯಂತ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ ಹೇಳಿದರು.
ಪಟ್ಟಣದ ಉಪನ್ಯಾಸಕರ ಬಡಾವಣೆಯ ಮೊನೇಶ್ವರ ಕಾಲೋನಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4 ಯಡಿ ಶೇ.5 ರ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ,ಒಳಚರಂಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಜೆಸಿಬಿಗೆ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿ,ಮಾತನಾಡಿದರು .
ಸಂಬಂಧಪಟ್ಟ ಗುತ್ತಿಗೆದಾರರು ಕಾಮಗಾರಿಗೆ ಬಳಸುವ ಸರಕುಗಳು ಗುಣಮಟ್ಟದಿಂದ ಕೂಡಿರಬೇಕು.ಪುರಸಭೆ ನಿಯಮಾನುಸಾರ ಒಳಚರಂಡಿ ,ರಸ್ತೆ ಕಾಮಗಾರಿ ನಡೆಯಬೇಕು.ಪಟ್ಟಣದ ಕೆಲವು ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಬಚ್ಚಲು ನೀರು ರಸ್ತೆ ಮೇಲೆ ಹರಿದಾಡುತ್ತಿರುವುದರಿಂದ ಜನ ಸಂಚಾರಕ್ಕೆ ತೊಂದರೆಯಾಗುತ್ತಲಿದೆ.ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
`ಭಾಲ್ಕಿ ಪಟ್ಟಣದಲ್ಲಿ ಅಗತ್ಯವಿರುವ ಕಡೆ ರಸ್ತೆ,ಒಳಚರಂಡಿ,ಕುಡಿಯುವ ನೀರು,ವಿದ್ಯುದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಒದಗಿಸಲಾಗುವುದು.ಡಿವೈಡರ್‍ಗಳಲ್ಲಿ ವಿವಿಧ ನಮೂನೆಯ ಸಸಿಗಳನ್ನು ಬೆಳೆಸಿ ಪಟ್ಟಣದ ಸೌಂದರ್ಯ ಹೆಚ್ಚಿಸಲಾಗುವುದು.ಸಾರ್ವಜನಿಕರು ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಿ,ಮರಗಳನ್ನು ಬೆಳೆಸಿ,ರಕ್ಷಿಸಬೇಕು.’-ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರು ಬೀದರ.