ಜಿಲ್ಲಾ ಪಂಚಾಯತಿ ಯೋಜನಾಧಿಕಾರಿಗಳ ಭೇಟಿ 10ನೇ ತರಗತಿಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮಠಪತಿ ಸಲಹೆ
ಆಳಂದ: ಜೂ.29:ತಾಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿಗಳು ಆಡಳಿತ ಸಭೆ ನಡೆಸಿ 10ನೇ ತರಗತಿಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕೈಗೊಳ್ಳಿ, ಶಾಲಾ ಶಿಕ್ಷಣ ಮತ್ತು ಮೂಲ ಸೌಲಭ್ಯಗಳ ಕ್ರಮಕೈಗೊಳ್ಳಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಆಗಿರುವ ತಾಪಂ ಆಡಳಿತ ಅಧಿಕಾರಿ ಎಸ್.ಎಸ್. ಮಠಪತಿ ಅವರು ಹಾಜರಿದ್ದ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಈಚೆಗೆ ಕರೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಭೆಯ ಮುಖ್ಯ ಉದ್ದೇಶ 10ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಸುಧಾರಿಸುವದು ಮತ್ತು ಶಾಲಾ ಮೂಲ ಸೌಲಭ್ಯಗಳನ್ನು ಬೆಂಬಲಿಸುವದು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಯೋಜನಾಧಿಕಾರಿಗಳು, “ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸಲು ಅಧ್ಯಾಪಕರು ಮತ್ತು ಪಾಲಕರು ಒಂದಾಗಿ ಕೆಲಸ ಮಾಡಬೇಕು,” ಎಂದು ಹೇಳಿಕೆ ನೀಡಿದರು.
ವಿದ್ಯಾರ್ಥಿಗಳಿಗೆ ಪಾಠಗಳನ್ನು ಸೃಜನಶೀಲ ಹಾಗೂ ಆಸಕ್ತಿದಾಯಕವಾಗಿ ಕಲಿಸಬೇಕಾಗಿದೆ. ನಿರ್ದಿಷ್ಟ ಪಠ್ಯಕ್ರಮವನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಗಮನ ಕೇಂದ್ರೀಕರಿಸಲು ಹೊಸ ಶೈಕ್ಷಣಿಕ ಕಾರ್ಯತಂತ್ರಗಳನ್ನು ಅಳವಡಿಸಬೇಕು. ಪರೀಕ್ಷಾ ತಯಾರಿಯನ್ನು ಸುಲಭಗೊಳಿಸಲು, ಅಧ್ಯಾಪಕರು ವಿಶೇಷ ತರಗತಿಗಳನ್ನು ಆಯೋಜಿಸಲು ಅವರು ಸೂಚನೆ ನೀಡಿದರು. ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟವನ್ನು ಉತ್ತಮಗೊಳಿಸಲು ಅಧ್ಯಾಪಕರು ಹಾಗೂ ಪಾಲಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ವಿದ್ಯಾರ್ಥಿಗಳಿಗೆ ಪಾಠಗಳನ್ನು ಸೃಜನಶೀಲ ರೀತಿಯಲ್ಲಿ ಕಲಿಸಬೇಕಾಗಿ, ನಿರ್ದಿಷ್ಟವಾದ ಸಮಯದೊಳಗೆ ಪಠ್ಯವನ್ನು ಮುಗಿಸುವಂತೆಯೂ ಸಲಹೆ ನೀಡಿದರು.
ಶಾಲಾ ಆವರಣದ ಮೂಲ ಸೌಲಭ್ಯಗಳ ಮೇಲೂ ತಮ್ಮ ಗಮನ ಹರಿಸಬೇಕು. ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಸ್ವಚ್ಛತೆ ವಿಷಯದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹಾಜರಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ಹಲವು ಸಮಸ್ಯೆಗಳು ಮತ್ತು ಸುಧಾರಣೆ ಸಲಹೆ ನೀಡಿದ ಅವರು, ಇದೇ ವೇಳೆ ಹಾಜರಿದ್ದ ಇನ್ನಿತರ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಕೈಗೊಂಡರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ತಾಪಂ ಯೋಜನಾಧಿಕಾರಿ ಶರಬಸವ ಶೀಲವಂತ, ಸಹಾಯಕ ಲೆಕ್ಕಾಧಿಕಾರಿ ಜಗದೀಶ ಕುಡಳ್ಳಿ, ಡಾ. ಯಲ್ಲಪ್ಪ ಇಂಗಳೆ, ಅಭಿವೃದ್ಧಿ ಅಧಿಕಾರಿ ನಾಗೇಶ ಮೂರ್ತಿ, ಶಿವಾನಂದ ಮಾನಿಂಗ, ರಾಮದಾಸ್ ಪೂಜಾರಿ ಸೇರಿದಂತೆ ಇನ್ನಿತರರು ಇದ್ದರು.