ಹು-ಧಾ ಮೇಯರ್ ಬಡಿಗೇರ, ಉಪಮೇಯರ್ ಬಿಜವಾಡ
ಹುಬ್ಬಳ್ಳಿ, ಜೂ29: ಬಹು ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ ಇಂದು ನಡೆದಿದ್ದು, ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಆಯ್ಕೆಯಾದರೆ, ಉಪಮೇಯರ್ ಆಗಿ ಅದೇ ಪಕ್ಷದ ದುರ್ಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನ ಹಿಂದುಳಿದ ವರ್ಗ ಅ' ಹಾಗೂ ಉಪಮೇಯರ್ ಸ್ಥಾನಪರಿಶಿಷ್ಟ ಜಾತಿಯ ಮಹಿಳೆ’ ಗೆ ಮೀಸಲಾಗಿತ್ತು.
ಕಾಂಗ್ರೆಸ್‍ನಿಂದ ಮೇಯರ್ ಸ್ಥಾನಕ್ಕೆ ಇಮಾಮ್ ಹುಸೇನ್ ಎಲಿಗಾರ ಕಣಕ್ಕಿಳಿದಿದ್ದರೆ ಉಪಮೇಯರ್ ಸ್ಥಾನಕ್ಕೆ
ಮಂಗಳಮ್ಮ ಹಿರೇಮನಿ ಸ್ಪರ್ಧಿಸಿದ್ದರು. ರಾಮಪ್ಪ ಬಡಿಗೇರ್ ಹಾಗೂ ದುರ್ಗಮ್ಮ ಬಿಜವಾಡ ಅವರ ಪರ 47 ಮತಗಳು ಚಲಾವಣೆಯಾದರೆ ಎಲಿಗಾರ ಹಾಗೂ ಮಂಗಳಮ್ಮ ಹಿರೇಮನಿ ಅವರ ಪರ 36 ಮತಗಳು ಚಲಾವಣೆಯಾಗಿ ಬಡಿಗೇರ ಹಾಗೂ ಬಿಜವಾಡ ಅವರ ಆಯ್ಕೆಯನ್ನು ಘೋಷಿಸಲಾಯಿತು.
ಮುಂಜಾನೆ ನಾಮಪತ್ರ ಸಲ್ಲಿಕೆ ಕಾರ್ಯದ ನಂತರ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ, ಇತ್ಯಾದಿ ಪ್ರಕ್ರಿಯೆಗಳು ನಡೆದ ಬಳಿಕ ಮಧ್ಯಾಹ್ನ ಸದಸ್ಯರು ಕೈ ಎತ್ತುವ ಮೂಲಕ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಿತು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ. ಶೆಟ್ಟೆಣ್ಣವರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ. ಸಂಕನೂರ ಉಪಸ್ಥಿತರಿದ್ದರು.