ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.29: ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆಗಳಿಗಾಗಿ ಒತ್ತಾಯಿಸಿ ಶುಕ್ರವಾರ ನಗರದ ಕಾರ್ಮಿಕ ಇಲಾಖೆಯ ಕಚೇರಿ ಎದುರು ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣಕಾರರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಶೈಕ್ಷಣಿಕ ಸಹಾಯಧನ ಸಂಬಂಧಿಸಿ ಹೊರಡಿಸಲಾಗಿದ್ದ 2023ರ ಅಧಿಸೂಚನೆಯನ್ನು ರದ್ದುಮಾಡಿ ಕರ್ನಾಟಕ ಹೈಕೋರ್ಟ್ ಆದೇಶದಂತೆ ಕನಿಷ್ಟ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 2023ನೇ ಸಾಲಿನಿಂದಲೇ 2021ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಸಹಾಯಧನ ನೀಡಬೇಕು. ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಕೆ ಅವಧಿಯನ್ನು 2024 ಆಗಸ್ಟ್ 31 ರವರೆಗೆ ವಿಸ್ತರಿಸಬೇಕು. ನೋಂದಣಿ ಮತ್ತು ಮರು ನೋಂದಣಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಸಕಾರಣವಿಲ್ಲದೇ, ಅರ್ಜಿ ಸಲ್ಲಿಕೆಯಲ್ಲಿನ ಸಣ್ಣಪುಟ್ಟ ದೋಷಗಳನ್ನೇ ಮುಂದುಮಾಡಿ ತಿರಸ್ಕರಿಸಲಾಗುತ್ತಿದೆ. ಇದು ನಿಲ್ಲಬೇಕು. ಅರ್ಜಿ ಸಲ್ಲಿಕೆಯಲ್ಲಿ ದೋಷವಿದ್ದರೂ ನೈಜ ಕಾರ್ಮಿಕರಾಗಿದ್ದಲ್ಲಿ ಅವರ ಅರ್ಜಿಯನ್ನು ಮಾನ್ಯ ಮಾಡಬೇಕು. ಹಾಗೂ ಕಾಲಮಿತಿಯಲ್ಲಿ ಅಜಿಗಳನ್ನು ವಿಲೇವಾರಿ ಮಾಡಬೇಕು. ಕೆಲವೆಡೆ ಬಿಲ್ಡಿಂಗ್ ಲೈಸನ್ಸ್ ಸಲ್ಲಿಸದಿರುವ ಕಾರಣವನ್ನು ಮುಂದುಮಾಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪಿಂಚಣಿಗಾಗಿ ಸಲ್ಲಿಸಲಾದ ಸಾವಿರಾರು ಅರ್ಜಿಗಳು ವಿಲೇವಾರಿ ಆಗಿಲ್ಲ. ಪಿಂಚಣಿ ಮುಂದುವರಿಕೆಗಾಗಿ ಸಲ್ಲಿಸಲಾದ ಅರ್ಜಿಗಳನ್ನೂ ವಿಲೇವಾರಿ ಮಾಡಿಲ್ಲ. ಜೊತೆಗೆ ಪಿಂಚಣಿಯನ್ನು ವರ್ಷದ 12 ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ. ಬಗ್ಗೆ ಹಲವು ದೂರುಗಳನ್ನು ನೀಡಲಾಗಿದ್ದರೂ ಉದಾಸೀನ, ನಿರ್ಲಕ್ಷ್ಯ ವಹಿಸಲಾಗಿದ್ದು, ಶೀಘ್ರವಾಗಿ ಪಿಂಚಣಿಗೆ ಸಂಬಂಧಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಪಿಂಚಣಿಯನ್ನು 60 ವರ್ಷಕ್ಕೆ ಪೂರ್ವನ್ವಯವಾಗುವಂತೆ ಜಾರಿ ಮಾಡಬೇಕೇ ಹೊರತು ಅರ್ಜಿ ಅನುಮೋದನೆಗೊಂಡ ಬಳಿಕವಲ್ಲ. ಇದನ್ನು ಹಲವು ಬಾರಿ ಚರ್ಚಿಸಲಾಗಿದ್ದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಪಿಂಚಣಿದಾರರಿಗೆ ಕನಿಷ್ಟ ವಾರ್ಷಿಕ 500 ರು. ಪಿಂಚಣಿ ಇಲ್ಲವೇ ರಾಜ್ಯ ಸರ್ಕಾದ ಡಿ.ಎ ಹೆಚ್ಚಳ ಆಧಾರಿಸಿ ಹೆಚ್ಚು ಮಾಡಬೇಕು. ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿಸಲ್ಲಿಸುವಾಗ ಉದ್ಭವವಾಗುತ್ತಿದ್ದ ಸರ್ವರ್ ಸಮಸ್ಯೆ ಸೇರಿದಂತೆ ಬೇರೊಂದು ಇಲಾಖೆಯ ಮೇಲೆ ಅವಲಂಬನೆಯಾಗುವುದುನ್ನು ತಪ್ಪಿಸುವ ಹಲವು ಕಾರಣಗಳಿಂದ ಪ್ರತ್ಯೇಕ ತಂತ್ರಾಂಶ ಹೊಂದಲಾಗಿತ್ತು. ಆದರೆ ಇಲ್ಲಿಯೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಹೊಸ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆಯನ್ನು ಶೀಘ್ರ ಸರಿಪಡಿಸಬೇಕು. ಸೇವಾಸಿಂಧು ತಂತ್ರಾಂಶದ ಮೂಲಕ ನೋಂದಣಿಯಾಗಿದ್ದು, ಸದ್ಯ ಮಂಡಳಿಯ ಹೊಸ ತಂತ್ರಾಂಶದಲ್ಲಿ ಮರುನೋಂದಣಿಗೆ ಹೋದಾಗ ‘ಡಾಟಾ ನಾಟ್ ಫೌಂಡ್’ ಎಂದು ಬರುತ್ತಿದೆ. ಈ ತರಹದ ಹಲವು ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ಎನ್. ಯಲ್ಲಾಲಿಂಗ, ಎಂ. ಗೋಪಾಲ್, ಹೇಮಂತ್ ನಾಯ್ಕ, ಗಾಳೆಪ್ಪ ಮತ್ತಿತರರಿದ್ದರು.