ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ: ಬಿಜೆಪಿ ಪ್ರತಿಭಟನೆ.
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ29: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರು. ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೂಡಲೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ವಿಜಯನಗರ ಜಿಲ್ಲಾ ಘಟಕ ಹಾಗೂ ಜಿಲ್ಲಾ ಎಸ್ಟಿ ಮೋರ್ಚಾ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಸಾಯಿಬಾಬಾ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಬಿಜೆಪಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧವೂ ಘೋಷಣೆಗಳನ್ನು ಮೊಳಗಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರೇ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಡಗಲಿ ಶಾಸಕ ಕೃಷ್ಣ ನಾಯ್ಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅವ್ಯವಹಾರ ಅಕ್ಷಮ್ಯ ಅಪರಾಧವಾಗಿದೆ. ಅಂಬೇಡ್ಕರ್ ನಿಗಮದಲ್ಲೂ ಅವ್ಯವಹಾರ ನಡೆದಿರಬಹುದು ಶಂಕಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಎಲ್ಲಾ ನಿಗಮಗಳ ಕುರಿತು ಎಸ್‍ಐಟಿ ರಚನೆ ಮಾಡಬೇಕು. ನಿಗಮಗಳ ಹಣವನ್ನೇ ನೇರ ದುರ್ಬಳಕೆ ಮಾಡಲಾಗಿದೆ. ಇದು ಘೋರ ದುರಂತವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೂಡ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಸರ್ಕಾರದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದನ್ನು ನಾವು ಕೇಳಿದ್ದೆವೆ. ಆದರೆ, ನಿಗಮದ ಹಣವನ್ನೇ ನೇರ ದುರ್ಬಳಕೆ ಮಾಡಲಾಗಿದೆ. ತೆಲಂಗಾಣದ ಸಹಕಾರ ಬ್ಯಾಂಕೊಂದಕ್ಕೆ ಕೋಟ್ಯಂತರ ರು. ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣ ಗಂಭೀರವಾಗಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಬೇಕು. ದಲಿತರ ಹಾಗೂ ಬಡವರ ಹಣವನ್ನು ನುಂಗಿ ಹಾಕಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೂ ಹಾಗೂ ಹೊರಗೂ ಹೋರಾಟ ನಡೆಸಲಿದೆ. ಬಡವರಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಮುಖಂಡ ಜಂಬಯ್ಯ ನಾಯಕ ಮಾತನಾಡಿ, ಬಹುಕೋಟಿ ರು. ಹಗರಣದಲ್ಲಿ ಈಗಾಗಲೇ 13 ಕೋಟಿ ರು. ಹಣ ಜಫ್ತು ಮಾಡಲಾಗಿದೆ. ಇನ್ನುಳಿದ 70 ಕೋಟಿ ರು. ಹಣವನ್ನು ಜಮೆ ಮಾಡಬೇಕಿದೆ. ಎಸ್ಟಿ ಸಮಾಜ ತೀರಾ ಹಿಂದುಳಿದಿದೆ. ಸರ್ಕಾರ ಈ ಸಮಾಜದ ಅಭಿವೃದ್ಧಿ ಮಾಡುವುದನ್ನು ಬಿಟ್ಟು, ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನೇ ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರ ತರಬೇಕಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಪೆÇಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ರಾಜ್ಯ ಯುವಮೋರ್ಚಾ ಕೋಶಾಧ್ಯಕ್ಷ ಸಿದ್ಧಾರ್ಥ್ ಸಿಂಗ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಕಮಟಗಿ, ಮುಖಂಡರಾದ ಬಲ್ಲಾಹುಣ್ಸಿ ರಾಮಣ್ಣ, ಮರಿಯಮ್ಮನಹಳ್ಳಿ ಕೃಷ್ಣ ನಾಯ್ಕ, ಕಾಸಟಿ ಉಮಾಪತಿ, ಸಂದೀಪ್ ಸಿಂಗ್, ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ಧಯ್ಯಸ್ವಾಮಿ,, ಸಂಜೀವರೆಡ್ಡಿ, ಕೆ.ಎಸ್. ರಾಘವೇಂದ್ರ, ಕಿಚಡಿ ಕೊಟ್ರೇಶ್, ಶಂಕರ್ ಮೇಟಿ, ನಾಗರಾಜ್, ಶಶಿಧರ, ಬೆಣಕಲ್ಲ್ ಪ್ರಕಾಶ್, ಲಕ್ಷ್ಮಣ್, ದೀನಾ ಮಂಜುನಾಥ, ಭಾರತಿ ಪಾಟೇಲ್,ಕವಿತಾ ಮತ್ತಿತರರಿದ್ದರು.